ಹಾಲಿ ಚಾಂಪಿಯನ್ ಆಸೀಸ್‌ಗೆ ಪ್ರಯಾಸದ ಜಯ

Update: 2018-11-30 16:21 GMT

ಭುವನೇಶ್ವರ, ನ.30: ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ತಂಡ ಶುಕ್ರವಾರ ಇಲ್ಲಿ ನಡೆದ ಪುರುಷರ ಹಾಕಿ ವಿಶ್ವಕಪ್ ಟೂರ್ನಮೆಂಟ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 2-1 ಜಯ ಗಳಿಸಿದೆ.

ಹ್ಯಾಟ್ರಿಕ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಆಸ್ಟ್ರೇಲಿಯಕ್ಕೆ ಮೊದಲ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಿತ್ತು. ಗೋವರ್ಸ್‌ ಮತ್ತು ಟಿಮೋಥಿ ಬ್ರಾಂಡ್ ದಾಖಲಿಸಿದ ಗೋಲುಗಳ ನೆರವಿನಲ್ಲಿ ಆಸ್ಟ್ರೇಲಿಯ ಗೆಲುವಿನ ನಗೆ ಬೀರಿದೆ.

ಐರ್ಲೆಂಡ್‌ನ ಪರ ಶೇನ್ ಒ’ ಡೋನೋಘು (13ನೇ ನಿಮಿಷ) ಮಾತ್ರ ಗೋಲು ದಾಖಲಿಸಿದರು.

2010 ಮತ್ತು 2014ರಲ್ಲಿ ಸತತ ವಿಶ್ವ ಚಾಂಪಿಯನ್ ಕಿರೀಟವನ್ನು ಧರಿಸಿರುವ ಆಸ್ಟ್ರೇಲಿಯ ಈ ಆವೃತ್ತಿಯಲ್ಲಿ ಕಪ್ ಗೆಲ್ಲುವ ಫೆವರೀಟ್ ತಂಡವಾಗಿ ವಿಶ್ವಕಪ್ ಪೂರ್ವದಲ್ಲಿ ಕಾಣಿಸಿಕೊಂಡಿತ್ತು.ಆದರೆ ಐರ್ಲೆಂಡ್ ವಿರುದ್ಧ ಅಷ್ಟೇನೂ ಉತ್ತಮವಾಗಿ ಆಡಿಲ್ಲ. ಐರ್ಲೆಂಡ್ ದಾಳಿ ಮತ್ತು ರಕ್ಷಣೆಯಲ್ಲಿ ಗಮನ ಸೆಳೆಯಿತು. ಆಸ್ಟ್ರೇಲಿಯಕ್ಕೆ ಐದು ಬಾರಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸುವ ಅವಕಾಶ ಸಿಕ್ಕಿದ್ದರೂ ಐರ್ಲೆಂಡ್ ನಾಲ್ಕು ಬಾರಿ ಗೋಲು ನಿರಾಕರಿಸಿತು. ಆಸ್ಟ್ರೇಲಿಯ ಒಂದು ಬಾರಿ ಮಾತ್ರ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲು ಆಗಿ ಪರಿವರ್ತಿಸುವಲ್ಲಿ ಯಶಸ್ಸು ಗಳಿಸಿತು.

ಬ್ಲೇಕ್ ಗೋವೆರ್ಸ್‌ 11ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಆಸ್ಟ್ರೇಲಿಯದ ಗೋಲು ಖಾತೆಯನ್ನು ತೆರೆದರು. ಆದರೆ 2 ನಿಮಿಷ ಕಳೆಯುವಷ್ಟರಲ್ಲಿ ಐರ್ಲೆಂಡ್‌ನ ಶೇನ್ ಒ’ ಡೋನೋಘು ಗೋಲು ಬಾರಿಸಿ 1-1 ಸಮಬಲ ಸಾಧಿಸಿದರು.

ಪಂದ್ಯದ 4ನೇ ನಿಮಿಷದಲ್ಲಿ ಐರ್ಲೆಂಡ್ ಗೋಲು ಗಳಿಸುವ ಯತ್ನ ನಡೆಸಿತ್ತು. ಆದರೆ ಆಸ್ಟ್ರೇಲಿಯದ ಗೋಲು ಕೀಪರ್ ಆ್ಯಂಡ್ರೋ ಚಾರ್ಟೆರ್ ಗೋಲು ನಿರಾಕರಿಸಿದರು. 6ನೇ ನಿಮಿಷದಲ್ಲಿ ಆಸ್ಟ್ರೇಲಿಯದ ಟಿಮ್ ಹೊವಾರ್ಡ್ ಅವರು ಚೆಂಡನ್ನು ವಶಕ್ಕೆ ತೆಗೆದುಕೊಂಡು ಗೋಲು ಗಳಿಸುವ ಯೋಜನೆಯಲ್ಲಿದ್ದಾಗ ಐರ್ಲೆಂಡ್ ಡಿಫೆಂಡರ್‌ಗಳು ಮುತ್ತಿಗೆ ಹಾಕಿ ಚೆಂಡನ್ನು ಕಿತ್ತುಕೊಂಡರು.

 10ನೇ ನಿಮಿಷದಲ್ಲಿ ಆಸ್ಟ್ರೇಲಿಯದ ಟಿಮೋಥಿ ಬ್ರಾಂಡ್ ಗುರಿಯತ್ತ ಚೆಂಡನ್ನು ತಳ್ಳಿದಾಗ ಐರ್ಲೆಂಡ್‌ನ ಗೋಲು ಕೀಪರ್ ಚೆಂಡನ್ನು ಹಿಂದಕ್ಕೆ ಕಳುಹಿಸಿದರು. ಆದರೆ ಅಷ್ಟರಲ್ಲಿ ಚೆಂಡು ಐರ್ಲೆಂಡ್‌ನ ಡಿಫೆಂಡರ್ ಒಬ್ಬನ ಕಾಲಿಗೆ ತಾಗಿತು. ಈ ಕಾರಣದಿಂದಾಗಿ ಆಸ್ಟ್ರೇಲಿಯಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತು.

11ನೇ ನಿಮಿಷದಲ್ಲಿ ಆಸ್ಟ್ರೇಲಿಯದ ಬ್ಲೇಕ್ ಗೋವೆರ್ಸ್‌ ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಮಿಂಚಿನ ವೇಗದಲ್ಲಿ ಗುರಿಯತ್ತ ತಳ್ಳಿದಾಗ ಐರ್ಲೆಂಡ್‌ನ ಗೋಲು ಕೀಪರ್ ಮತ್ತು ಡಿಫೆಂಡರ್‌ಗಳಿಗೆ ಏನನ್ನು ಮಾಡಲು ಸಾಧ್ಯವಾಗಲಿಲ್ಲ. ಅವರು ನೋಡುವಷ್ಟರಲ್ಲಿ ಚೆಂಡು ಗೋಲು ಬಲೆಗೆ ಸೇರಿ ಆಗಿತ್ತು.

 1-0 ಮುನ್ನಡೆ ಸಾಧಿಸಿದ ಆಸ್ಟ್ರೇಲಿಯಕ್ಕೆ 2 ನಿಮಿಷಗಳಲ್ಲಿ ಆಘಾತ ಕಾದಿತ್ತು. ಯುಜೀನ್ ಮ್ಯಾಗೀ ಚೆಂಡನ್ನು ಜಾಣತನದಿಂದ ವಶಕ್ಕೆ ತೆಗೆದುಕೊಂಡು ಶೇನ್ ಒ ಡೊನೋಘು ಅವರತ್ತ ಪಾಸ್ ಮಾಡಿದರು. ಒ ಡೊನೋಘು ಈ ಅವಕಾಶವನ್ನು ವ್ಯರ್ಥಗೊಳಿಸದೆ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಐರ್ಲೆಂಡ್ 1-1 ಸಮಬಲ ಸಾಧಿಸಿತು. ಬಳಿಕ ಆಸ್ಟ್ರೇಲಿಯದ ಆಟಗಾರರು ಹಲವು ಬಾರಿ ಗೋಲು ಗಳಿಸುವ ಪ್ರಯತ್ನ ನಡೆಸಿತು. ಆದರೆ ಅವರ ಪ್ರಯತ್ನ ಫಲ ನೀಡಲಿಲ್ಲ. ಪ್ರಥಮಾರ್ಧ ಕೊನೆಗೊಂಡಾಗ ಉಭಯ ತಂಡಗಳು 1-1 ಗೋಲುಗಳಿಂದ ಸಮಬಲ ಸಾಧಿಸಿತ್ತು.

34ನೇ ನಿಮಿಷದಲ್ಲಿ ಆಸ್ಟ್ರೇಲಿಯದ ಟಿಮೋಥಿ ಬ್ರಾಂಡ್ ಗೋಲು ಗಳಿಸಿ ತಂಡಕ್ಕೆ 2-1 ಮುನ್ನಡೆಗೆ ನೆರವಾದರು. ಬಳಿಕ ಆಸ್ಟ್ರೇಲಿಯದಿಂದ ಗೋಲು ಬರಲಿಲ್ಲ. ಐರ್ಲೆಂಡ್‌ಗೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಆಸ್ಟ್ರೇಲಿಯ ಗೆಲುವು ದಾಖಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News