×
Ad

ಮಹಿಳಾ ಕೋಚ್ ಸ್ಥಾನಕ್ಕೆ ಅರ್ಜಿ ಆಹ್ವಾನ

Update: 2018-11-30 23:38 IST

ಹೊಸದಿಲ್ಲಿ, ನ.30: ಭಾರತ ಮಹಿಳಾ ತಂಡದ ಕೋಚ್ ರಮೇಶ್ ಪೊವಾರ್ ಅವರ ಮೂರು ತಿಂಗಳ ಪ್ರಭಾರಿ ಕೋಚ್ ಅವಧಿ ಶುಕ್ರವಾರ ಕೊನೆಗೊಂಡಿದೆ. ಪೊವಾರ್ ಹುದ್ದೆಯಲ್ಲಿ ಮುಂದುವರಿಯಲು ತಂಡದ ಎಲ್ಲ ಆಟಗಾರ್ತಿಯರ ಬೆಂಬಲವಿದೆ. ಆದರೆ ಹಿರಿಯ ಆಟಗಾರ್ತಿ ಮಿಥಾಲಿರಾಜ್ ಅವರೊಂದಿಗಿನ ಭಿನ್ನಾಭಿಪ್ರಾಯಕ್ಕೆ ಪೊವಾರ್ ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗಿದೆ. ಮಹಿಳಾ ಕ್ರಿಕೆಟ್ ತಂಡದ ಮುಖ್ಯಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಿದೆ.

ಪೂರ್ಣಾವಧಿ ಕೋಚ್ ಹುದ್ದೆ ಎರಡು ವರ್ಷಗಳ ಅವಧಿಯದ್ದಾಗಿದೆ. ಅಭ್ಯರ್ಥಿಯ ವಯಸ್ಸು 60 ವರ್ಷ ಮೀರಿರಬಾರದು. ಡಿಸೆಂಬರ್ 20 ರಂದು ಮುಂಬೈನ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ಅಭ್ಯರ್ಥಿಯ ಸಂದರ್ಶನ ನಡೆಯಲಿದೆ. ಕೋಚ್ ಹುದ್ದೆಗೆ ಆಸ್ಟ್ರೇಲಿಯದ ಟಾಮ್ ಮೂಡಿ, ಡೇವಿಡ್ ವಾಟ್ಮೋರೆ ಹಾಗೂ ಭಾರತ ವೆಂಕಟೇಶ್ ಪ್ರಸಾದ್ ಹೆಸರುಗಳ ಆಯ್ಕೆಯು ಬಿಸಿಸಿಐ ಪಟ್ಟಿಯಲ್ಲಿವೆ.

‘‘ಪೊವಾರ್ ಅವರ ಕೋಚ್ ಒಪ್ಪಂದ ಇಂದು ಕೊನೆಗೊಳ್ಳಲಿದೆ. ಆದರೆ, ಅವರು ಮತ್ತೊಮ್ಮೆ ಕೋಚ್ ಆಗುವ ಸಾಧ್ಯತೆ ಕಡಿಮೆ. ಭಾರತದ ಮಾಜಿ ಸ್ಪಿನ್ನರ್ ಪೊವಾರ್ ಅರ್ಜಿ ಸಲ್ಲಿಸಿದರೂ ಅವರನ್ನು ಹುದ್ದೆಗೆ ಪರಿಗಣಿಸುವ ಸಾಧ್ಯತೆಯಿಲ್ಲ’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗೆ ವೆಸ್ಟ್‌ಇಂಡೀಸ್‌ನಲ್ಲಿ ಕೊನೆಗೊಂಡ ಮಹಿಳಾ ವಿಶ್ವಕಪ್‌ನಲ್ಲಿ ಮಿಥಾಲಿ ರಾಜ್‌ರನ್ನು ಇಂಗ್ಲೆಂಡ್ ವಿರುದ್ಧ ಸೆಮಿ ಫೈನಲ್‌ನಿಂದ ಕೈಬಿಡುವ ಮೂಲಕ ವಿವಾದ ತಲೆಎತ್ತಿತ್ತು. ಈ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಸೋತಿತ್ತು.

ಬಿಸಿಸಿಐನ ಪ್ರಭಾವಿ ಸದಸ್ಯರೊಬ್ಬರ ದೂರವಾಣಿ ಕರೆಗೆ ಅನುಗುಣವಾಗಿ ವರ್ತಿಸುತ್ತಿದ್ದ ಪೊವಾರ್ ವಿಶ್ವಕಪ್‌ನ ನಾಕೌಟ್ ಪಂದ್ಯಗಳಲ್ಲಿ ಸತತ ಅರ್ಧಶತಕ ಸಿಡಿಸಿದ್ದ ಮಿಥಾಲಿ ರಾಜ್‌ರನ್ನು ಸೆಮಿ ಫೈನಲ್‌ನಿಂದ ಕೈಬಿಟ್ಟಿದ್ದಕ್ಕೆ ಬಿಸಿಸಿಐ ಅಧಿಕಾರಿಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

ವೆಸ್ಟ್‌ಇಂಡೀಸ್‌ನಿಂದ ವಾಪಸಾದ ಬಳಿಕ ಬಿಸಿಸಿಐಯನ್ನು ಭೇಟಿಯಾಗಿದ್ದ ಪೊವಾರ್ ಅವರು ಮೊದಲ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿಯಾಗಿದ್ದ ರಾಜ್‌ರನ್ನು ಆ ಬಳಿಕದ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿಸಿದ್ದೇಕೆ?, ಸೆಮಿ ಫೈನಲ್‌ನಲ್ಲಿ ಕೈಬಿಟ್ಟಿದ್ದೇಕೆ?ಎಂಬ ಪ್ರಶ್ನೆಗೆ ಸರಿಯಾದ ಉತ್ತರ ನೀಡಿಲ್ಲ. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಪೊವಾರ್ ಅವರು ರಾಜ್‌ರನ್ನು ಸಂಪರ್ಕಿಸಬೇಕಾಗಿತ್ತು ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ ಎಂದು ತಿಳಿದುಬಂದಿದೆ.

ಪೊವಾರ್ ತನ್ನ ವೃತ್ತಿಜೀವನ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಮಿಥಾಲಿ ಆರೋಪಿಸಿದ್ದರು. ಮಿಥಾಲಿಯ ವರ್ತನೆಯನ್ನು ಪ್ರಶ್ನಿಸುವುದರೊಂದಿಗೆ ಪೊವಾರ್ ತಿರುಗೇಟು ನೀಡಿದ್ದರು.

ತುಷಾರ್ ಅರೋಥೆಗೆ ಹಿರಿಯ ಆಟಗಾರ್ತಿ ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಕೋಚ್ ಹುದ್ದೆ ತ್ಯಜಿಸಿದ್ದರು. ಪೊವಾರ್ ಆಗಸ್ಟ್‌ನಲ್ಲಿ ಹಂಗಾಮಿ ಕೋಚ್ ಆಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News