ರಣಜಿ: ಕರ್ನಾಟಕ ಗೆಲುವಿಗೆ 184 ರನ್ ಗುರಿ
ಮೈಸೂರು, ನ.30: ಆಲ್‌ರೌಂಡರ್ ಶ್ರೇಯಸ್ ಗೋಪಾಲ್(4-64), ನಾಯಕ ವಿನಯಕುಮಾರ್(3-41) ಹಾಗೂ ಪವನ್ ದೇಶಪಾಂಡೆ(2-23)ಸಂಘಟಿತ ದಾಳಿಯ ನೆರವಿನಿಂದ ರಣಜಿ ಟ್ರೋಫಿ ಪಂದ್ಯದಲ್ಲಿ ಮಹಾರಾಷ್ಟ್ರವನ್ನು ಎರಡನೇ ಇನಿಂಗ್ಸ್ ನಲ್ಲಿ 256 ರನ್‌ಗೆ ನಿಯಂತ್ರಿಸಿದ ಕರ್ನಾಟಕ ಗೆಲ್ಲಲು 184 ರನ್ ಗುರಿ ಪಡೆದಿದೆ.
ಕರ್ನಾಟಕ ಮೂರನೇ ದಿನವಾದ ಶುಕ್ರವಾರ ಆಟ ಕೊನೆಗೊಂಡಾಗ ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿದೆ. ಕೊನೆಯ ದಿನವಾದ ಶನಿವಾರ ಗೆಲ್ಲಲು ಇನ್ನೂ 130 ರನ್ ಗಳಿಸಬೇಕಾಗಿದೆ. ಆರಂಭಿಕ ಆಟಗಾರರಾದ ದೇವದತ್ತ ಪಡಿಕ್ಕಲ್(ಔಟಾಗದೆ 33, 58 ಎಸೆತ, 4 ಬೌಂಡರಿ, 1 ಸಿಕ್ಸರ್)ಹಾಗೂ ನಿಶ್ಚಲ್(21,62 ಎಸೆತ, 2 ಬೌಂಡರಿ) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮೊದಲು 3 ವಿಕೆಟ್‌ಗಳ ನಷ್ಟಕ್ಕೆ 48 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಮಹಾರಾಷ್ಟ್ರ ತಂಡ ಋತುರಾಜ್ ಗಾಯಕ್ವಾಡ್(89,161 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ನೌಶಾದ್ ಶೇಕ್(73,121 ಎಸೆತ, 5 ಬೌಂಡರಿ, 1 ಸಿಕ್ಸರ್)ಅರ್ಧಶತಕದ ಕೊಡುಗೆಯ ನೆರವಿನಿಂದ 97 ಓವರ್‌ಗಳಲ್ಲಿ 256 ರನ್ ಗಳಿಸಿ ಆಲೌಟಾಯಿತು.
9 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ಗಾಯಕ್ವಾಡ್ ನಿನ್ನೆಯ ಸ್ಕೋರ್‌ಗೆ 80 ರನ್ ಸೇರಿಸಿದರು. ಇಂದು ಬ್ಯಾಟಿಂಗ್ ಮುಂದುವರಿಸಿದ ಗಾಯಕ್ವಾಡ್ ಹಾಗೂ ಸತ್ಯಜೀತ್ 4ನೇ ವಿಕೆಟ್‌ಗೆ 60 ರನ್ ಜೊತೆಯಾಟ ನಡೆಸಿದರು. ಆದರೆ, ಸತ್ಯಜೀತ್ ಔಟಾದ ಬಳಿಕ ವಿಕೆಟ್‌ಕೀಪರ್ ರೋಹಿತ್ ಮೊಟ್ವಾನಿ(2), ನಾಯಕ ರಾಹುಲ್ ತ್ರಿಪಾಠಿ(8)ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ತಂಡದ ಪರ ಅಗ್ರ ಸ್ಕೋರರ್ ಎನಿಸಿಕೊಂಡ ಗಾಯಕ್ವಾಡ್‌ಗೆ ನೌಶಾದ್ ಶೇಕ್(73) ಜೊತೆಯಾದರು. ಈ ಇಬ್ಬರು 7ನೇ ವಿಕೆಟ್‌ಗೆ 106 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಈ ಜೋಡಿಯನ್ನು ಕರ್ನಾಟಕದ ನಾಯಕ ವಿನಯಕುಮಾರ್ ಬೇರ್ಪಡಿಸಿದರು. ಶತಕದ ನಿರೀಕ್ಷೆಯಲ್ಲಿದ್ದ ಗಾಯಕ್ವಾಡ್ 89 ರನ್ ಗಳಿಸಿ ಔಟಾದರು.
ಈ ಇಬ್ಬರು ಬೇರ್ಪಟ್ಟ ಬಳಿಕ ಮಹಾರಾಷ್ಟ್ರ ತಂಡ ಕುಸಿತದ ಹಾದಿಹಿಡಿಯಿತು. ಸಂಕ್ಷೇಚ(8) ಹಾಗೂ ಶೇಕ್ ಔಟಾದರು. ಫಲ್ಲಾಹ್(6)ವಿಕೆಟ್ ಉರುಳಿಸುವ ಮೂಲಕ ವಿನಯಕುಮಾರ್ ಮಹಾರಾಷ್ಟ್ರದ 2ನೇ ಇನಿಂಗ್ಸ್‌ಗೆ ತೆರೆ ಎಳೆದರು.