ಆಸ್ಟ್ರೇಲಿಯ ಕ್ರಿಕೆಟಿಗ ಉಸ್ಮಾನ್ ಖ್ವಾಜಾ ಸಹೋದರನ ಬಂಧನ
ಸಿಡ್ನಿ, ಡಿ.4: ಭಯೋತ್ಪಾದಕರ ನಕಲಿ ‘ಹಿಟ್ ಲಿಸ್ಟ್’ ಸೃಷ್ಟಿಸಿ ತನ್ನ ಮಾಜಿ ಕಾಲೇಜು ಸಹೋದ್ಯೋಗಿ ಬಂಧನಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಆಸ್ಟ್ರೇಲಿಯ ಕ್ರಿಕೆಟಿಗ ಉಸ್ಮಾನ್ ಖ್ವಾಜಾ ಅವರ ಸಹೋದರನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
39ರ ಹರೆಯದ ಆರ್ಸಾಖಾನ್ ಖ್ವಾಜಾ ತನ್ನ ಸ್ನೇಹಿತನ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸಲು ಹೋಗಿ ಸ್ವತಃ ಸಿಕ್ಕಿ ಹಾಕಿಕೊಂಡಿದ್ದಾರೆ.
ಆರ್ಸಾಖಾನ್ ಸ್ನೇಹಿತ ಮುಹಮ್ಮದ್ ನಿಝಾಮುದ್ದೀನ್ ಅವರ ನೋಟ್ ಬುಕ್‌ನಲ್ಲಿ ಉಗ್ರರ ಹಿಟ್ ಲಿಸ್ಟ್ ಪತ್ತೆಯಾಗಿತ್ತು. ಹಿಟ್ ಲಿಸ್ಟ್‌ನಲ್ಲಿ ಆಗಿನ ಆಸ್ಟ್ರೇಲಿಯದ ಪ್ರಧಾನಮಂತ್ರಿ ಮಾಲ್ಕಂ ಟರ್ನ್‌ಬಾಲ್ ಇದ್ದಾರೆಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ನಿಝಾಮುದ್ದೀನ್‌ರನ್ನು ಆಗಸ್ಟ್‌ನಲ್ಲಿ ಬಂಧಿಸಿದ್ದರು. ತನಿಖೆಯ ವೇಳೆ ನೋಟ್‌ಬುಕ್‌ನಲ್ಲಿನ ಕೈಬರಹ ನಿಝಾಮ್ದೀನ್ ಕೈಬರಹಕ್ಕೆ ತಾಳೆಯಾಗುತ್ತಿಲ್ಲ ಎಂಬ ಅಂಶ ತಿಳಿದಾಗ ಪೊಲೀಸರು ಅವರನ್ನು ಬಿಡುಗಡೆಗೊಳಿಸಿದ್ದರು.
ತನ್ನ ಸ್ನೇಹಿತನ ನೋಟ್‌ಬುಕ್‌ನಲ್ಲಿ ನಕಲಿ ಹಿಟ್‌ಲಿಸ್ಟ್ ಬರೆದಿದ್ದ ಆರೋಪದಲ್ಲಿ ಆರ್ಸಾಕನ್ ಖ್ವಾಜಾರನ್ನು ಮಂಗಳವಾರ ಸಿಡ್ನಿಯಲ್ಲಿ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಶ್ರೀಲಂಕಾ ಮೂಲದ ಮುಹಮ್ಮದ್ ನಿಝಾಮುದ್ದೀನ್‌ರನ್ನು ಬಂಧಿಸಿದ್ದಕ್ಕೆ ಆಸ್ಟ್ರೇಲಿಯ ಪೊಲೀಸರು ಕ್ಷಮೆಯಾಚಿಸಿದ್ದಾರೆ. ಅವರ ವಿರುದ್ಧ ಪ್ರಕರಣವನ್ನು ಕೈಬಿಡಲಾಗಿದ್ದು, ಅವರ ಕೋರ್ಟು-ಕಚೇರಿಯ ಖರ್ಚು-ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದು ಸೌತ್ ವೇಲ್ಸ್ ಸಹಾಯಕ ಆಯುಕ್ತ ಮಿಕ್ ವಿಲ್ಲಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.