ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಗಂಭೀರ್ ನಿವೃತ್ತಿ
ಹೊಸದಿಲ್ಲಿ, ಡಿ.4: ಭಾರತ ಕ್ರಿಕೆಟಿಗ ಹಾಗೂ 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಗೌತಮ್ ಗಂಭೀರ್ ಮಂಗಳವಾರ ದಿಢೀರನೇ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ಪ್ರಕಟಿಸಿದ್ದಾರೆ.
37ರ ಹರೆಯದ ದಿಲ್ಲಿಯ ದಾಂಡಿಗ ಗಂಭೀರ್ ಟ್ವಿಟರ್‌ನ ಮೂಲಕ ನಿವೃತ್ತಿಯ ಘೋಷಣೆ ಮಾಡಿದರು.
2007ರ ಟ್ವೆಂಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಪರ ಗರಿಷ್ಠ ಸ್ಕೋರ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಗಂಭೀರ್ ಎರಡು ದಶಕಗಳ ವೃತ್ತಿಜೀವನದಲ್ಲಿ 10,000ಕ್ಕೂ ಅಧಿಕ ಅಂತರ್‌ರಾಷ್ಟ್ರೀಯ ರನ್ ಗಳಿಸಿದ್ದಾರೆ. 2003ರಲ್ಲಿ ಏಕದಿನ ಕ್ರಿಕೆಟ್, 2004ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿರುವ ಗಂಭೀರ್ 58 ಟೆಸ್ಟ್‌ನಲ್ಲಿ 4,154 ರನ್, 147 ಏಕದಿನದಲ್ಲಿ 5,238 ರನ್ ಹಾಗೂ 37 ಟಿ-20ಯಲ್ಲಿ 932 ರನ್ ಕಲೆ ಹಾಕಿದ್ದಾರೆ.
ಎಡಗೈ ಆರಂಭಿಕ ದಾಂಡಿಗ ಗಂಭೀರ್ 2016ರ ನವೆಂಬರ್‌ನಲ್ಲಿ ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿ ಭಾರತವನ್ನು ಪ್ರತಿನಿಧಿಸಿದ್ದರು.