ಸೌರಾಷ್ಟ್ರಕ್ಕೆ ಮಣಿದ ಕರ್ನಾಟಕ
ರಾಜ್‌ಕೋಟ್, ಡಿ.8: ಸೌರಾಷ್ಟ್ರದ ಸ್ಪಿನ್‌ದ್ವಯರಾದ ಧರ್ಮೇಂದ್ರಸಿನ್ಹಾ ಜಡೇಜ ಹಾಗೂ ಕಮಲೇಶ್ ಮಕ್ವಾನಾ ದಾಳಿಗೆ ತತ್ತರಿಸಿದ ಕರ್ನಾಟಕ ರಣಜಿ ಪಂದ್ಯದಲ್ಲಿ 87 ರನ್‌ಗಳಿಂದ ಸೋಲನ್ನಪ್ಪಿದೆ.
ಇಲ್ಲಿಯ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಶನಿವಾರ ಕೊನೆಗೊಂಡ ಪಂದ್ಯದಲ್ಲಿ ಕರ್ನಾಟಕ ತೀವ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಗೆಲುವಿಗೆ 179 ರನ್‌ಗಳ ಗುರಿ ಪಡೆದಿದ್ದ ಕರ್ನಾಟಕ, ಕಮಲೇಶ್ ಮಕ್ವಾನಾ(28ಕ್ಕೆ 5) ಹಾಗೂ ಧರ್ಮೇಂದ್ರ ಅವರ ಬಿಗು ಬೌಲಿಂಗ್ ದಾಳಿಗೆ 91 ರನ್‌ಗಳಿಗೆ ಗಂಟುಮೂಟೆ ಕಟ್ಟುವ ಮೂಲಕ ಮುಖಭಂಗ ಅನುಭವಿಸಿತು.
ಮೂರನೇ ದಿನ ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ತಂಡವು ಕರ್ನಾಟಕದ ತ್ರಿವಳಿ ಸ್ಪಿನ್ನರ್‌ಗಳಾದ ಜಗದೀಶ್ ಸುಚಿತ್(29ಕ್ಕೆ 3), ಶ್ರೇಯಸ್ ಗೋಪಾಲ್(10ಕ್ಕೆ 3) ಹಾಗೂ ಪವನ್ ದೇಶಪಾಂಡೆ(5ಕ್ಕೆ 3)ದಾಳಿಗೆ 79 ರನ್‌ಗಳಿಗೆ ಮಂಡಿಯೂರಿತು. ವಿಕೆಟ್ ಕೀಪರ್ ಸ್ನೆಲ್ ಪಟೇಲ್ 22ರನ್ ಗಳಿಸಿದ್ದೇ ಸೌರಾಷ್ಟ್ರದ ಪರ ಗರಿಷ್ಠ ಮೊತ್ತವಾಯಿತು. ಸೌರಾಷ್ಟ್ರವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದ ಖುಷಿಯಲ್ಲಿ ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ 91 ರನ್‌ಗಳಿಗೆ ತನ್ನ ಆಟ ಮುಗಿಸಿತು. ಕರ್ನಾಟಕದ ಪರ ಕರುಣ್ ನಾಯರ್(30, 55 ಎಸೆತ) ಹಾಗೂ ಶ್ರೇಯಸ್ ಗೋಪಾಲ್( 27, 72 ಎಸೆತ) ಅಲ್ಪ ಪ್ರತಿರೋಧ ಒಡ್ಡಿದರೂ ಗೆಲ್ಲಿಸಲು ಸಾಕಾಗುವಷ್ಟು ಬಲ ತೋರಲಿಲ್ಲ. ಮಕ್ವಾನಾ ಮತ್ತು ಧರ್ಮೇಂದ್ರ ಒಟ್ಟು ಒಂಬತ್ತು ವಿಕೆಟ್‌ಗಳನ್ನು ಹಂಚಿಕೊಂಡರು.
ಮೂರನೇ ದಿನದಾಟದಲ್ಲಿ ಒಂದೇ ದಿನದಲ್ಲಿ 20 ವಿಕೆಟ್‌ಗಳು ಉರುಳಿದ್ದು ಬೌಲರ್‌ಗಳ ಮೆರೆದಾಟಕ್ಕೆ ಸಾಕ್ಷಿಯಂತಿತ್ತು. ಅಂದಾಜು 60 ಓವರ್‌ಗಳಲ್ಲಿ ಎರಡೂ ಇನಿಂಗ್ಸ್‌ಗಳಿಗೆ ತೆರೆಬಿದ್ದಿತ್ತು.
ಸಂಕ್ಷಿಪ್ತ ಸ್ಕೋರ್
ಸೌರಾಷ್ಟ್ರ ಪ್ರಥಮ ಇನಿಂಗ್ಸ್: 316ಕ್ಕೆ ಆಲೌಟ್
ಕರ್ನಾಟಕ ಪ್ರಥಮ ಇನಿಂಗ್ಸ್: 217ಕ್ಕೆ ಆಲೌಟ್
ಸೌರಾಷ್ಟ್ರ 2ನೇ ಇನಿಂಗ್ಸ್: 79ಕ್ಕೆ ಆಲೌಟ್
(ಸ್ನೆಲ್ ಪಟೇಲ್ 22, ಪವನ್ ದೇಶಪಾಂಡೆ 5ಕ್ಕೆ 3, ಶ್ರೇಯಸ್ ಗೋಪಾಲ್ 10ಕ್ಕೆ 3) ಕರ್ನಾಟಕ ಎರಡನೇ ಇನಿಂಗ್ಸ್: 91ಕ್ಕೆ ಆಲೌಟ್
(ಕರುಣ್ 30, ಕಮಲೇಶ್ ಮಕ್ವಾನಾ 28ಕ್ಕೆ 5, ಜಡೇಜ 44ಕ್ಕೆ 4)