ಹ್ಯಾಟ್ರಿಕ್ ಜಯದೊಂದಿಗೆ ಅಂತಿಮ-8ಕ್ಕೆ ಜಿಗಿದ ಜರ್ಮನಿ

Update: 2018-12-09 18:05 GMT

ಭುವನೇಶ್ವರ, ಡಿ.9: ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ಜರ್ಮನಿ ತಂಡ ರವಿವಾರ ನಡೆದ ಹಾಕಿ ವಿಶ್ವಕಪ್‌ನ ‘ಡಿ’ ಗುಂಪಿನಲ್ಲಿ ಮಲೇಶ್ಯಾ ತಂಡವನ್ನು 5-3 ಅಂತರದಿಂದ ಮಣಿಸಿತು. ಈ ಮೂಲಕ ಹ್ಯಾಟ್ರಿಕ್ ಜಯ ಸಾಧಿಸಿದ ಜರ್ಮನಿ 3 ಪಂದ್ಯಗಳಲ್ಲಿ ಒಟ್ಟು 9 ಅಂಕ ಗಳಿಸಿ ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಪಡೆಯಿತು.

ಕಳಿಂಗ ಸ್ಟೇಡಿಯಂನಲ್ಲಿ ನಡೆದ ಹಣಾಹಣಿಯಲ್ಲಿ ಟಿಮ್ ಹೆರ್ಝ್‌ಬ್ರುಚ್(2ನೇ,59ನೇ ನಿಮಿಷ)ಹಾಗೂ ಕ್ರಿಸ್ಟೋಫರ್ ರೂಹ್ರ್(14ನೇ ನಿ., 18ನೇ ನಿಮಿಷ) ದಾಖಲಿಸಿದ ಅವಳಿ ಗೋಲು ಹಾಗೂ ಮಾರ್ಕೊ ಮಿಲ್ಡ್‌ಕಾವ್(39ನೇ ನಿ.) ಸಹಾಯದಿಂದ ವಿಶ್ವದ ನಂ.6ನೇ ತಂಡ ಜರ್ಮನಿ ರೋಚಕ ಜಯ ಸಾಧಿಸಿತು. ಜರ್ಮನಿ ಪಂದ್ಯ ಆರಂಭವಾದ 2ನೇ ನಿಮಿಷದಲ್ಲಿ ಗೋಲು ಖಾತೆ ತೆರೆಯಿತು. 59ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯಕ್ಕೆ ಅಂತ್ಯ ಹಾಡಿತು. ಈ ಎರಡು ಗೋಲುಗಳನ್ನು ಟಿಮ್ ಬಾರಿಸಿದ್ದು ವಿಶೇಷ. ಮಲೇಶ್ಯಾ ಎಲ್ಲ ಮೂರು ಗೋಲುಗಳನ್ನು ಪೆನಾಲ್ಟಿ ಕಾರ್ನರ್ ಮೂಲಕ ಬಾರಿಸಿತು. ರಾಝಿ ರಹೀಮ್(26ನೇ,42ನೇ ನಿಮಿಷ) ಹಾಗೂ ನಬಿಲ್ ನೂರ್(28ನೇ ನಿಮಿಷ)ಗೋಲು ಗಳಿಸಿದ್ದಾರೆ.

ಸತತ 3 ಜಯ ಗಳಿಸಿರುವ ಜರ್ಮನಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ 4ನೇ ತಂಡ ಎನಿಸಿಕೊಂಡಿತು. ಈಗಾಗಲೇ 2 ಬಾರಿಯ ಚಾಂಪಿಯನ್ ಆಸ್ಟ್ರೇಲಿಯ, ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನ ಹಾಗೂ ಆತಿಥೇಯ ಭಾರತ ತಂಡ ಕ್ವಾ.ಫೈನಲ್ ತಲುಪಿವೆ.

ಎರಡೂ ತಂಡಗಳು ಹಲವು ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದವು. ಮಲೇಶ್ಯಾ 8 ಹಾಗೂ ಜರ್ಮನಿ 7 ಬಾರಿ ಈ ಅವಕಾಶ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News