ಭಾರತ ‘ಎ’ಗೆ ಸರಣಿ ಜಯದ ಸವಿ

Update: 2018-12-09 18:15 GMT

ಬೇ ಓವಲ್(ನ್ಯೂಝಿಲೆಂಡ್), ಡಿ.9: ಕನ್ನಡಿಗ ಮನೀಷ್ ಪಾಂಡೆಯ ಸೊಗಸಾದ ಶತಕದ ನೆರವಿನಿಂದ ಭಾರತ ‘ಎ’ ತಂಡ, ನ್ಯೂಝಿಲೆಂಡ್ ’ಎ’ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ಸರಣಿ ಗೆದ್ದು ಬೀಗಿದೆ.

ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ನೀಡಿದ್ದ 300 ರನ್‌ಗಳ ಗುರಿ ಬೆನ್ನಟ್ಟಿದ ಭಾರತದ ಪರ ಮನೀಷ್ ಪಾಂಡೆ 109 ಎಸೆತಗಳಲ್ಲಿ 111 ರನ್‌ಗಳಿಸಿ ಅಜೇಯರಾಗಿ ಉಳಿದರು. ಶ್ರೇಯಸ್ ಅಯ್ಯರ್(59) ಹಾಗೂ ವಿಜಯ್‌ಶಂಕರ್(59) ಅರ್ಧಶತಕಗಳ ಕೊಡುಗೆಯ ಮೂಲಕ ಜಯ ಸರಳವಾಗಿಸಿದರು.

ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತಕ್ಕೆ ಮಧ್ಯಮ ವೇಗಿ ಖಲೀಲ್ ಅಹ್ಮದ್ ಪ್ರಥಮ ಓವರ್‌ನಲ್ಲೇ ವಿಕೆಟ್ ದೊರಕಿಸಿಕೊಟ್ಟರು. ನ್ಯೂಝಿಲೆಂಡ್ ‘ಎ’ಪರ ವಿಲ್ ಯೂಂಗ್(102) ಶತಕ ಬಾರಿಸಿದರೆ ಜಾರ್ಜ್ ವರ್ಕರ್ (99) ಕೇವಲ 1 ರನ್‌ನಿಂದ ಶತಕವಂಚಿತಗೊಂಡು ನಿರಾಶೆ ಅನುಭವಿಸಿದರು. ಡೆರಿಲ್ ಮಿಚೆಲ್(45) ಅಲ್ಪಕಾಣಿಕೆ ನೆರವಿನಿಂದ ನ್ಯೂಝಿಲೆಂಡ್ ತಂಡ 299 ರನ್‌ಗಳ ಉತ್ತಮ ಮೊತ್ತ ಪೇರಿಸಿತು. ಭಾರತ ‘ಎ’ ಪರ ಖಲೀಲ್ ಅಹ್ಮದ್(65ಕ್ಕೆ2), ನವದೀಪ್ ಸೈನಿ(68ಕ್ಕೆ 2) ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದರು. ವಿಜಯಕ್ಕೆ 300 ರನ್‌ಗಳ ಗುರಿ ಪಡೆದ ಪ್ರವಾಸಿಗರು, 49 ಓವರ್‌ಗಳಲ್ಲಿ ಗುರಿ ತಲುಪಿ ಮೆರೆದರು. ಮನೀಷ್ ಪಾಂಡೆ ಶತಕ ಗಳಿಸಿದರೆ ಶ್ರೇಯಸ್ ಅಯ್ಯರ್, ವಿಜಯ್‌ಶಂಕರ್ ಅರ್ಧಶತಕಗಳ ಕಾಣಿಕೆ ನೀಡಿದರು. ಈ ಜಯದ ಮೂಲಕ ಭಾರತ ‘ಎ’ 3 ಪಂದ್ಯಗಳ ಸರಣಿಯಲ್ಲಿ ಸತತ 2 ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡಿತು. ಮೂರನೇ ಮತ್ತು ಕೊನೆಯ ಪಂದ್ಯ ಡಿ.11ರಂದು ವೌಂಟ್ ವೌಂಗಾನ್ಯೂನಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್

►ನ್ಯೂಝಿಲೆಂಡ್ ಎ: 50 ಓವರ್‌ಗಳಲ್ಲಿ 9ವಿಕೆಟ್ ನಷ್ಟಕ್ಕೆ 299 (ವಿಲ್ ಯೂಂಗ್ 102, ಜಾರ್ಜ್ ವರ್ಕರ್ 99, ಖಲೀಲ್ ಅಹ್ಮದ್ 65ಕ್ಕೆ 2, ನವದೀಪ್ ಸೈನಿ 68ಕ್ಕೆ 2)

►ಭಾರತ ಎ: 49 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 300( ಮನೀಷ್ ಪಾಂಡೆ ಅಜೇಯ 111, ವಿಜಯ್‌ಶಂಕರ್ 59, ಶ್ರೇಯಸ್ ಅಯ್ಯರ್ 59)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News