ಹಾಕಿ ವಿಶ್ವಕಪ್: ಭಾರತದ ಐತಿಹಾಸಿಕ ಗೆಲುವಿನ ಕನಸು ಭಗ್ನ

Update: 2018-12-13 15:31 GMT

ಭುವನೇಶ್ವರ, ಡಿ.13: ಪುರುಷರ ವಿಶ್ವಕಪ್‌ನ ನಾಲ್ಕನೇ ಕ್ವಾರ್ಟರ್‌ಫೈನಲ್‌ನಲ್ಲಿ ಆತಿಥೇಯ ಭಾರತ ಬಲಿಷ್ಠ ಹಾಲೆಂಡ್ ವಿರುದ್ಧ 2-1 ಗೋಲುಗಳ ಅಂತರದಿಂದ ಸೋಲನುಭವಿಸಿದೆ. ಈ ಸೋಲಿನೊಂದಿಗೆ 43 ವರ್ಷಗಳ ಬಳಿಕ ವಿಶ್ವಕಪ್‌ನ ಸೆಮಿ ಫೈನಲ್‌ಗೆ ತಲುಪುವ ಆತಿಥೇಯರ ಕನಸು ಭಗ್ನವಾಗಿದೆ.

ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಪರ ಆಕಾಶ್‌ದೀಪ್ ಸಿಂಗ್(12ನೇ ನಿಮಿಷ) ಏಕೈಕ ಗೋಲು ಬಾರಿಸಿದರು. ಹಾಲೆಂಡ್‌ನ ಪರ ಥಿಯರಿ ಬ್ರಿಂಕ್‌ಮನ್(15ನೇ ನಿ.)ಹಾಗೂ ಮಿಂಕ್ ವ್ಯಾನ್‌ಡರ್ ವೀರ್ಡನ್(50ನೇ ನಿ.) ತಲಾ ಒಂದು ಗೋಲು ಗಳಿಸಿ ತಂಡದ ಗೆಲುವಿಗೆ ನೆರವಾದರು.

 ಹಾಲೆಂಡ್ ಡಿ.15 ರಂದು ನಡೆಯುವ 2ನೇ ಸೆಮಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ.

 ಹಾಲೆಂಡ್ ತಂಡ ಮೂರನೇ ಕ್ವಾರ್ಟರ್‌ನಲ್ಲಿ ಒಂದು ಹಂತದಲ್ಲಿ ಸತತ 3 ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಭಾರತ ಮೂರು ಅವಕಾಶದಲ್ಲಿ ಎದುರಾಳಿಗೆ ಗೋಲು ನಿರಾಕರಿಸಿತು. ವ್ಯಾಂಡರ್ ವೀರ್ಡನ್ 50ನೇ ನಿಮಿಷದಲ್ಲಿ ಪೆನಾಲ್ಟಿಕಾರ್ನರನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ ಮಹತ್ವದ ಮುನ್ನಡೆ ಒದಗಿಸಿಕೊಟ್ಟರು. ಇದಕ್ಕೂ ಮೊದಲು ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು 1-1 ರಿಂದ ಸಮಬಲ ಸಾಧಿಸಿದ್ದವು.

12ನೇ ನಿಮಿಷದಲ್ಲಿ ರಿವರ್ಸ್ ಫ್ಲಿಕ್ ಮೂಲಕ ಗೋಲು ಬಾರಿಸಿದ ಆಕಾಶ್ ದೀಪ್ ಸಿಂಗ್ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

 ಆತಿಥೇಯರ ಮುನ್ನಡೆಯ ಸಂಭ್ರಮ ಹೆಚ್ಚುಹೊತ್ತು ಉಳಿಯಲಿಲ್ಲ. 15ನೇ ನಿಮಿಷದಲ್ಲಿ ಗೋಲ್‌ಕೀಪರ್ ಶ್ರೀಜೇಶ್‌ರನ್ನು ವಂಚಿಸಿದ ಥಿಯರಿ ಬ್ರಿಂಕ್‌ಮನ್ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು.

ಭಾರತಕ್ಕೆ 11ನೇ ನಿಮಿಷದಲ್ಲಿ ಮೊದಲ ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತು. ಆದರೆ ಇದನ್ನು ಬಳಸಿಕೊಳ್ಳಲು ವಿಫಲವಾಯಿತು.

ಉಭಯ ತಂಡಗಳು 2018ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದು, ಆ ಪಂದ್ಯ 1-1ರಿಂದ ಡ್ರಾನಲ್ಲಿ ಕೊನೆಗೊಂಡಿತ್ತು. ಹಾಲೆಂಡ್ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಆಡಿರುವ 6 ಪಂದ್ಯಗಳಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದ್ದು, 5ರಲ್ಲಿ ಗೆಲುವು ಹಾಗೂ ಒಂದರಲ್ಲಿ ಡ್ರಾ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News