ಹಾಕಿ ವಿಶ್ವಕಪ್: ಬೆಲ್ಜಿಯಂ ಚಾಂಪಿಯನ್

Update: 2018-12-16 15:22 GMT

 ಭುವನೇಶ್ವರ, ಡಿ.16: ಕುತೂಹಲಕಾರಿಯಾಗಿ ನಡೆದ ಹಾಕಿ ವಿಶ್ವಕಪ್‌ನ ಫೈನಲ್ ಪಂದ್ಯದ ಪೆನಾಲ್ಟಿ ಶೂಟೌಟ್‌ನಲ್ಲಿ ಹಾಲೆಂಡ್‌ನ್ನು 3-2 ಅಂತರದಿಂದ ಮಣಿಸಿದ ಬೆಲ್ಜಿಯಂ ಚಾಂಪಿಯನ್‌ಪಟ್ಟಕ್ಕೇರಿತು.

ರವಿವಾರ ಇಲ್ಲಿನ ಕಳಿಂಗ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ನ ಫೈನಲ್ ಪಂದ್ಯ ಇದೇ ಮೊದಲ ಬಾರಿ ನಿಗದಿತ 60 ನಿಮಿಷಗಳ ಆಟ ಗೋಲುರಹಿತವಾಗಿ ಕೊನೆಗೊಂಡಿತು. ಆಗ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಶೂಟೌಟ್‌ನ ತಲಾ 5 ಪ್ರಯತ್ನದಲ್ಲಿ ಉಭಯ ತಂಡಗಳು 2-2 ರಿಂದ ಸಮಬಲ ಸಾಧಿಸಿದವು. ಆಗ ವಿಶ್ವಕಪ್ ವಿಜೇತರನ್ನು ನಿರ್ಧರಿಸಲು ‘ಸಡನ್ ಡೆತ್ ರೌಂಡ್’ ಅಳವಡಿಸಲಾಯಿತು.

ಸಡನ್‌ಡೆತ್ ರೌಂಡ್‌ನಲ್ಲಿ ಹಾಲೆಂಡ್‌ನ ಹೆರ್ಟ್‌ಬರ್ಗರ್ ಗೋಲು ಗಳಿಸಲು ವಿಫಲರಾದರು. ಈ ಹಿನ್ನೆಲೆಯಲ್ಲಿ ಬೆಲ್ಜಿಯಂ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ಯುರೋಪ್‌ನ ಎರಡು ಬಲಿಷ್ಠ ತಂಡಗಳು ಮೊದಲಾರ್ಧದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದವು. ಆರಂಭದಲ್ಲಿ ಹಾಲೆಂಡ್‌ಗೆ ಹಲವು ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತು. ಆದರೆ, ಟೂರ್ನಿಯಲ್ಲಿ ಇದನ್ನು ಗೋಲಾಗಿ ಪರಿವರ್ತಿಸುವಲ್ಲಿನ ತನ್ನ ಕಳಪೆ ನಿರ್ವಹಣೆಯನ್ನು ಪುನರಾವರ್ತಿಸಿತು.

 ಬೆಲ್ಜಿಯ ವಿರುದ್ಧ ವಿಶ್ವಕಪ್‌ನಲ್ಲಿ ಹಾಲೆಂಡ್‌ನ ಅಜೇಯ ದಾಖಲೆ ಕೊನೆಗೊಂಡಿದೆ. ಹಾಲೆಂಡ್ ತಂಡ ಬೆಲ್ಜಿಯಂ ವಿರುದ್ಧ ಆಡಿರುವ 3 ವಿಶ್ವಕಪ್‌ ಪಂದ್ಯಗಳಲ್ಲೂ ಜಯಶಾಲಿಯಾಗಿತ್ತು. 2013ರ ಬಳಿಕ 13 ಪಂದ್ಯಗಳಲ್ಲಿ ಎರಡು ತಂಡಗಳು ಹೋರಾಟ ನಡೆಸಿದ್ದು, ಈ ಪೈಕಿ ಹಾಲೆಂಡ್ 6ರಲ್ಲಿ, ಬೆಲ್ಜಿಯಂ 5ರಲ್ಲಿ ಜಯ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News