×
Ad

ಏಶ್ಯಕಪ್‌ನಲ್ಲಿ ಮಾದರಿ ಪ್ರದರ್ಶನ ನೀಡುವೆ: ಸುನೀಲ್ ಚೆಟ್ರಿ

Update: 2018-12-19 23:23 IST

ಹೊಸದಿಲ್ಲಿ, ಡಿ.19: ‘‘ಮುಂಬರುವ ಯುಎಇನಲ್ಲಿ ನಡೆಯಲಿರುವ ಎಎಫ್‌ಸಿ ಏಶ್ಯಕಪ್‌ನಲ್ಲಿ ಸಹ ಆಟಗಾರರಿಗೆ ಮಾದರಿಯಾಗುವ ರೀತಿಯ ಪ್ರದರ್ಶನ ನೀಡುವೆ’’ ಎಂದು ಭಾರತದ ನಾಯಕ ಸುನೀಲ್ ಚೆಟ್ರಿ ಭರವಸೆ ನೀಡಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಏಶ್ಯಕಪ್‌ಗೆ ಭಾರತದ ಫುಟ್ಬಾಲ್ ಆಟಗಾರರಿಗೆ ಬುಧವಾರ ಹೊಸ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚೆಟ್ರಿ ಮಾತನಾಡಿದರು.

ಚೆಟ್ರಿ 2011ರಲ್ಲಿ ಏಶ್ಯಕಪ್‌ನಲ್ಲಿ ಭಾಗವಹಿಸಿದ್ದ ಭಾರತ ತಂಡದಲ್ಲಿದ್ದರು. ಕತರ್‌ನಲ್ಲಿ ನಡೆದಿದ್ದ ಏಶ್ಯಕಪ್‌ನಲ್ಲಿ ಭಾರತ ಎಲ್ಲ 3 ಗ್ರೂಪ್ ಪಂದ್ಯಗಳಲ್ಲಿ ಸೋತಿತ್ತು. ಈ ಬಾರಿ ಕೊನೆಯ ಸಲ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿರುವ 34ರ ಹರೆಯದ ಚೆಟ್ರಿ ಉತ್ತಮ ಪ್ರದರ್ಶನ ನೀಡುವುದಾಗಿ ಹೇಳಿದ್ದಾರೆ.

‘‘2011ರಲ್ಲಿ ಕೆಲವು ಹಿರಿಯ ಆಟಗಾರರಿದ್ದರು. ಆಗ ಅವರಿಂದ ಕಲಿತ ಪಾಠವನ್ನು ಈ ಬಾರಿ ಬಳಸಿಕೊಳ್ಳಲು ಪ್ರಯತ್ನಿಸುವೆ. ಎಲ್ಲ ಆಟಗಾರರು ಒಗ್ಗಟ್ಟಿನ ಪ್ರದರ್ಶನ ನೀಡುವ ಅಗತ್ಯವಿದೆ’’ ಎಂದು ಭಾರತದ ಪರ 2005ರಿಂದ 103 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿ 65 ಗೋಲುಗಳನ್ನು ಗಳಿಸಿರುವ ಚೆಟ್ರಿ ಹೇಳಿದ್ದಾರೆ. ಭಾರತ ಫುಟ್ಬಾಲ್‌ನಲ್ಲಿ ತಾನೊಬ್ಬನೇ ಪ್ರಸಿದ್ಧ ಆಟಗಾರನೆಂಬ ಮಾತನ್ನು ಒಪ್ಪದ ಚೆಟ್ರಿ,‘‘ಡಿಫೆಂಡರ್ ಸಾದೇಶ್ ಜಿಂಗನ್, ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಹಾಗೂ ಸಹ ಸ್ಟ್ರೈಕರ್ ಜೇಜೆ ಲಾಲ್‌ಪೆಕುಲ್ವಾ ತನ್ನ ಕೆಲಸವನ್ನು ಸುಲಭಗೊಳಿಸುತ್ತಿದ್ದಾರೆ. ನನಗೆ ಯಾವ ಒತ್ತಡವೂ ಇಲ್ಲ. ಸಹ ಆಟಗಾರರಿಗೆ ಹೆಚ್ಚು ಹೊರೆಯಿದೆ’’ ಎಂದು ಹೇಳಿದರು. ಭಾರತ ಜ.6ರಂದು ಥಾಯ್ಲೆಂಡ್ ವಿರುದ್ಧ ಗ್ರೂಪ್ ‘ಎ’ ಪಂದ್ಯವನ್ನು ಆಡುವುದರೊಂದಿಗೆ ಏಶ್ಯಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಆ ಬಳಿಕ ಆತಿಥೇಯ ಯುಎಇ ಹಾಗೂ ಬಹರೈನ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News