×
Ad

ಬಡತನದಲ್ಲಿ ಅರಳಿದ ಕುಸುಮ ರಜನಿಗೆ ಚಿನ್ನದ ಪದಕ

Update: 2018-12-19 23:29 IST

ನಾನು ಆರು ಮಂದಿ ಒಡಹುಟ್ಟಿದವರ ಪೈಕಿ ಮೂರನೇಯವಳು. ನಾನು ಬೆಳಗ್ಗೆ ಎದ್ದೇಳುವ ಮೊದಲೇ ತಂದೆ ತನ್ನ ಕೆಲಸ ಆರಂಭಿಸುತ್ತಾರೆ. ಹಳ್ಳಿ ಮನೆಗಳಿಂದ ಲಸ್ಸಿಯನ್ನು ಸಂಗ್ರಹಿಸುತ್ತಾರೆ. ನಮ್ಮ ಹಳ್ಳಿಯಿಂದ ಪಾಣಿಪತ್‌ಗೆ ಬೈಕ್‌ನಲ್ಲಿ ಹೋಗಿ ಲಸ್ಸಿ ಮಾರಾಟ ಮಾಡುತ್ತಾರೆ. ನಾನು ಬಾಕ್ಸಿಂಗ್‌ನತ್ತ ಒಲವು ತೋರಿದಾಗ ಅವರು ನನಗೆ ಬೆಂಬಲ ನೀಡಿದ್ದರು. ನನ್ನ ಹಳ್ಳಿಯಲ್ಲಿ ಸುರಿಂದರ್ ಸಿಂಗ್‌ರಿಂದ ತರಬೇತಿ ಪಡೆಯುತ್ತಿದ್ದೇನೆ. ಹಳೆಯ ಗ್ಲೌಸ್‌ವೊಂದಿಗೆ ಬಾಕ್ಸಿಂಗ್ ಅಭ್ಯಾಸ ಮಾಡುತ್ತೇನೆ. ಒಂದು ಕಾಲದಲ್ಲಿ ನಮಗೆ ಮೂರು ಹೊತ್ತಿನ ಊಟಕ್ಕೂ ಗತಿಯಿರಲಿಲ್ಲ. ನನ್ನ ತಾಯಿ ಉಷಾ ರಾಣಿ ಉಳಿದ ಅಲ್ಪಸ್ವಲ್ಪ ಮೊಸರಿನಿಂದ ತುಪ್ಪ ಮಾಡಿ ನನಗೆ ನೀಡುತ್ತಿದ್ದರು

ರಜನಿ, ಚಿನ್ನದ ಪದಕ ವಿಜೇತೆ

ಚಂಡಿಗಡ, ಡಿ.19: ದ್ವಿತೀಯ ಆವೃತ್ತಿಯ ಜೂನಿಯರ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತರಪ್ರದೇಶದ 16ರ ಹರೆಯದ ರಜನಿ ಚಿನ್ನದ ಪದಕ ಜಯಿಸಿ ಗಮನ ಸೆಳೆದಿದ್ದಾರೆ.

ಚಂಡೀಗಡ ಯುನಿವರ್ಸಿಟಿಯಲ್ಲಿ ನಡೆದ ಮಹಿಳೆಯರ 48 ಕೆಜಿ ಫೈನಲ್‌ನಲ್ಲಿ ರಾಗಿನಿ ಉಪಾಧ್ಯಾಯ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿ ಚಿನ್ನದ ನಗೆ ಬೀರಿದರು.

ರಜನಿ ಪದಕ ಸ್ವೀಕರಿಸಿದ ತಕ್ಷಣ ಹಾಲ್‌ನ ಹೊರಗಿರುವ ಮಿಲ್ಕ್ ಬೂತ್‌ನತ್ತ ಓಡಿ ಒಂದು ಗ್ಲಾಸ್ ಹಾಲು ಕುಡಿದರು. ಆ ಬಳಿಕ ತನ್ನ ಬಟ್ಟೆಯಿಂದ ಪದಕವನ್ನು ಸ್ವಚ್ಛಗೊಳಿಸಿ ತನ್ನ ಬ್ಯಾಗ್‌ನಲ್ಲಿರಿಸಿದರು. ತನ್ನ ತಂದೆ ಜಸ್ಮೀರ್ ಸಿಂಗ್ ಕೈಗೆ ನೀಡುವ ತನಕ ಪದಕವನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ರಜನಿಯ ಉದ್ದೇಶವಾಗಿತ್ತು.

ತನ್ನನ್ನು ಬಾಕ್ಸರ್ ಆಗಿ ರೂಪಿಸಿದ ತಂದೆ ಪ್ರತಿದಿನ ಎಷ್ಟೊಂದು ಕಷ್ಟಪಡುತ್ತಾರೆಂದು ರಜನಿಗೆ ಚೆನ್ನಾಗಿ ಗೊತ್ತಿದೆ. ರಜನಿ ತಂದೆ ದಿನಕ್ಕೆ 12 ಗಂಟೆ ಕಾಲ ಪಾಣಿಪತ್‌ನಲ್ಲಿ ಲಸ್ಸಿ ಮಾರುತ್ತಾರೆ. ‘‘ನಾನು ಆರು ಮಂದಿ ಒಡಹುಟ್ಟಿದವರ ಪೈಕಿ ಮೂರನೇಯವಳು. ನಾನು ಬೆಳಗ್ಗೆ ಎದ್ದೇಳುವ ಮೊದಲೇ ತಂದೆ ತನ್ನ ಕೆಲಸ ಆರಂಭಿಸುತ್ತಾರೆ. ಹಳ್ಳಿ ಮನೆಗಳಿಂದ ಲಸ್ಸಿಯನ್ನು ಸಂಗ್ರಹಿಸುತ್ತಾರೆ. ನಮ್ಮ ಹಳ್ಳಿಯಿಂದ ಪಾಣಿಪತ್‌ಗೆ ಬೈಕ್‌ನಲ್ಲಿ ಹೋಗಿ ಲಸ್ಸಿ ಮಾರಾಟ ಮಾಡುತ್ತಾರೆ. ನಾನು ಬಾಕ್ಸಿಂಗ್‌ನತ್ತ ಒಲವು ತೋರಿದಾಗ ಅವರು ನನಗೆ ಬೆಂಬಲ ನೀಡಿದ್ದರು. ನನ್ನ ಹಳ್ಳಿಯಲ್ಲಿ ಸುರಿಂದರ್ ಸಿಂಗ್‌ರಿಂದ ತರಬೇತಿ ಪಡೆಯುತ್ತಿದ್ದೇನೆ. ಹಳೆಯ ಗ್ಲೌಸ್‌ವೊಂದಿಗೆ ಬಾಕ್ಸಿಂಗ್ ಅಭ್ಯಾಸ ಮಾಡುತ್ತೇನೆ. ನಮಗೆ ಒಂದು ಕಾಲದಲ್ಲಿ ಮೂರು ಹೊತ್ತಿನ ಊಟಕ್ಕೂ ಗತಿಯಿರಲಿಲ್ಲ. ನನ್ನ ತಾಯಿ ಉಷಾ ರಾಣಿ ಉಳಿದ ಅಲ್ಪಸ್ವಲ್ಪ ಮೊಸರಿನಿಂದ ತುಪ್ಪ ಮಾಡಿ ನನಗೆ ನೀಡುತ್ತಿದ್ದರು’’ ಎಂದು ರಜನಿ ತನ್ನ ಬಾಲ್ಯದ ಕಷ್ಟವನ್ನು ನೆನಪಿಸಿಕೊಂಡರು.

ರಜನಿ ತನ್ನ ಹಳ್ಳಿಯ ಫುಲ್ ಸಿಂಗ್ ಸ್ಮಾರಕ ಬಾಕ್ಸಿಂಗ್ ಕ್ಲಬ್‌ನಲ್ಲಿ ಕೋಚ್ ಮಲಿಕ್‌ರಿಂದ ತರಬೇತಿಯನ್ನು ಆರಂಭಿಸಿದ್ದರು. ಕಳೆದ ವರ್ಷ ಡೆಹ್ರಾಡೂನ್‌ನಲ್ಲಿ ನಡೆದ ಮೊದಲ ಬಿಎಸ್‌ಎಫ್ ಜೂನಿಯರ್ ನ್ಯಾಶನಲ್ಸ್‌ನಲ್ಲಿ 46 ಕೆಜಿ ವಿಭಾಗದಲ್ಲಿ ಮೊದಲ ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.

ಈ ವರ್ಷ ಸರ್ಬಿಯದಲ್ಲಿ ನಡೆದಿರುವ ನೇಶನ್ಸ್ ಜೂನಿಯರ್ ಕಪ್‌ನಲ್ಲಿ ಚಿನ್ನ ಪದಕ ಜಯಿಸಿದ್ದಾರೆ. ಫೈನಲ್‌ನಲ್ಲಿ ರಶ್ಯದ ಅನಸ್ಟೇಸಿಯ ಕಿರಿಯೆಂಕೊರನ್ನು ಮಣಿಸಿದ್ದರು. ರಜನಿಗೆ ಅದು ಮೊದಲ ವಿದೇಶ ಪ್ರವಾಸವಾಗಿತ್ತು. ‘‘ನನ್ನ ಹಳ್ಳಿಯಿಂದ 100 ಕಿ.ಮೀ. ದೂರದಲ್ಲಿರುವ ಪಾಣಿಪತ್‌ಗೆ ಬೈಕ್‌ನಲ್ಲಿ ತೆರಳಿ ಲಸ್ಸಿ ಮಾರುತ್ತೇನೆ. ಕೆಲವೊಮ್ಮೆ 400-500 ರೂ.ಲಾಭವಾಗುತ್ತದೆ. ಬೇಸಿಗೆಯಲ್ಲಿ ಲಸ್ಸಿ ಬೇಗನೆ ಕೆಡುತ್ತದೆ. ಆಗ ಲಾಭ ಇರುವುದಿಲ್ಲ. ರಜನಿ ಬಾಕ್ಸಿಂಗ್‌ನಲ್ಲಿ ಆಸಕ್ತಿ ತೋರಿದಾಗ ನಾವು ಮಾಡದ್ದನ್ನು ಆಕೆ ಮಾಡಬೇಕೆಂದು ಬಯಸಿದ್ದೆವು’’ ಎಂದು ರಜನಿ ತಂದೆ ಜಸ್ಮೀರ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News