×
Ad

ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ರಾಮನ್ ಆಯ್ಕೆ

Update: 2018-12-20 22:58 IST

ಮುಂಬೈ, ಡಿ.20: ಭಾರತದ ಮಾಜಿ ಆರಂಭಿಕ ಆಟಗಾರ ಡಬ್ಲುವಿ ರಾಮನ್ ಭಾರತ ಮಹಿಳಾ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ಆಡಳಿತಾಧಿಕಾರಿಗಳ ಮಧ್ಯೆ ಭಿನ್ನಾಭಿಪ್ರಾಯವಿರುವ ಹೊರತಾಗಿಯೂ ದಕ್ಷಿಣ ಆಫ್ರಿಕದ ಗ್ಯಾರಿ ಕರ್ಸ್ಟನ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿದ ರಾಮನ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

53ರ ಹರೆಯದ ರಾಮನ್ ಪ್ರಸ್ತುತ ಬೆಂಗಳೂರಿನಲ್ಲಿರುವ ನ್ಯಾಶನಲ್ ಕ್ರಿಕೆಟ್ ಅಕಾಡಮಿಯಲ್ಲಿ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘‘ಬಿಸಿಸಿಐ ಕೋಚ್ ಆಯ್ಕೆಗಾಗಿಯೇ ನೇಮಿಸಿರುವ ತಜ್ಞರ ಸಮಿತಿ ಕರ್ಸ್ಟನ್‌ರನ್ನು ಮೊದಲ ಆಯ್ಕೆಯಾಗಿ ಪರಿಗಣಿಸಿದೆ. ಆದರೆ, ಅವರು ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೂ ಮುಖ್ಯ ಕೋಚ್ ಹುದ್ದೆಯಲ್ಲಿದ್ದಾರೆ. ಹೀಗಾಗಿ ರಾಮನ್ ಮಹಿಳಾ ತಂಡದ ಕೋಚ್ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳಾ ಕೋಚ್ ಹುದ್ದೆ ಆಯ್ಕೆಗೆ ಮಾಜಿ ನಾಯಕ ಕಪಿಲ್‌ದೇವ್, ಅಂಶುಮನ್ ಗಾಯಕ್ವಾಡ್ ಹಾಗೂ ಶಾಂತಾ ರಾಮಸ್ವಾಮಿ ಅವರನ್ನೊಳಗೊಂಡ ವಿಶೇಷ ಸಮಿತಿಯನ್ನು ರಚಿಸಲಾಗಿದೆ.

ಆಯ್ಕೆ ಸಮಿತಿಯು ಕರ್ಸ್ಟನ್, ರಾಮನ್ ಹಾಗೂ ವೆಂಕಟೇಶ್ ಪ್ರಸಾದ್ ಹೆಸರನ್ನು ಶಿಫಾರಸು ಮಾಡಿ ಕ್ರಿಕೆಟ್ ಮಂಡಳಿಗೆ ನೀಡಿತ್ತು. ಅಂತಿಮವಾಗಿ ರಾಮನ್‌ರನ್ನು ಕೋಚ್ ಹುದ್ದೆಗೆ ಬಿಸಿಸಿಐ ಆಯ್ಕೆ ಮಾಡಿದೆ ಎಂದು ಖಚಿತ ಮೂಲಗಳು ತಿಳಿಸಿವೆ.

ರಮೇಶ್ ಪೊವಾರ್ ಅವರ ಹಂಗಾಮಿ ಕೋಚ್ ಅವಧಿ ನ.30ರಂದು ಅಂತ್ಯವಾಗಿತ್ತು. ಏಕದಿನ ವಿಶ್ವಕಪ್‌ನಲ್ಲಿ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಆಯ್ಕೆಗೆ ಸಂಬಂಧಿಸಿ ಮಧ್ಯಪ್ರವೇಶಿಸಿದ್ದ ಪೊವಾರ್ ವಿವಾದಕ್ಕೆ ಸಿಲುಕಿದ್ದರು. ಟಿ-20 ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಉಪ ನಾಯಕಿ ಸ್ಮತಿ ಮಂಧಾನ ಅವರು ಪೊವಾರ್‌ಗೆ ಬೆಂಬಲ ವ್ಯಕ್ತಪಡಿಸಿದ ಕಾರಣ ಭಾರತದ ಮಾಜಿ ಸ್ಪಿನ್ನರ್ ಪೊವಾರ್ ಮತ್ತೊಮ್ಮೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಇಂದು ನಡೆದ ಕೋಚ್ ಅಭ್ಯರ್ಥಿಗಳ ಸಂದರ್ಶನದಲ್ಲೂ ಭಾಗಿಯಾಗಿದ್ದರು.

ಮಹಿಳಾ ಕ್ರಿಕೆಟ್ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗಲೇ ಕೋಚ್ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು.

ಡಯಾನ ಎಡುಲ್ಜಿ ಆಯ್ಕೆ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಸಮಿತಿ ಅಧ್ಯಕ್ಷ ವಿನೋದ್ ರಾಯ್‌ರನ್ನು ಕೇಳಿಕೊಂಡಿದ್ದಾರೆ. ಬಿಸಿಸಿಐ ಖಜಾಂಚಿ ಅನಿರುದ್ಧ ಚೌಧರಿ ಕೂಡ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ. ಆಯ್ಕೆ ಪ್ರಕ್ರಿಯೆ ಕ್ರಿಕೆಟ್ ಮಂಡಳಿಯ ಪರವಾಗಿಲ್ಲ. ಈ ಪ್ರಕ್ರಿಯೆಗೆ ರಾಯ್ ಸಮ್ಮತಿಯಿದೆ. ಆದರೆ ಇದಕ್ಕೆ ಎಡುಲ್ಜಿ ಒಪ್ಪಿಗೆ ಇಲ್ಲ ಎಂದಿದ್ದಾರೆ.

1965ರಲ್ಲಿ ಮದ್ರಾಸ್‌ನಲ್ಲಿ ಜನಿಸಿದ್ದ ರಾಮನ್ 1982ರಿಂದ 1999ರ ತನಕ ದೇಶೀಯ ಕ್ರಿಕೆಟ್‌ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದರು. ಎಡಗೈ ದಾಂಡಿಗ ಹಾಗೂ ಪಾರ್ಟ್ ಟೈಮ್ ಬೌಲರ್ ಆಗಿದ್ದ ರಾಮನ್ ಭಾರತದ ಪರ 11 ಟೆಸ್ಟ್ ಹಾಗೂ 27 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ರಾಮನ್ 1992-93ರ ದಕ್ಷಿಣ ಆಫ್ರಿಕ ಪ್ರವಾಸದ ವೇಳೆ ಶತಕ(113 ರನ್) ಸಿಡಿಸಿದ್ದರು. ರಾಮನ್ ಆಫ್ರಿಕ ದೇಶದಲ್ಲಿ ಶತಕ ಸಿಡಿಸಿದ್ದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದರು. ಇದು ಅವರ ವೃತ್ತಿಜೀವನದ ಮರೆಯಲಾರದ ಕ್ಷಣವಾಗಿತ್ತು.

ಪ್ರಸ್ತುತ ದೇಶದ ಉತ್ತಮ ಕೋಚ್ ಆಗಿರುವ ರಾಮನ್ ತಮಿಳುನಾಡು ಹಾಗೂ ಬಂಗಾಳ ರಣಜಿ ತಂಡಗಳಿಗೆ ಕೋಚಿಂಗ್ ನೀಡಿದ್ದ್ದಾರೆ. ಭಾರತದ ಅಂಡರ್-19 ತಂಡಕ್ಕೂ ಕೋಚ್ ಆಗಿದ್ದರು. ಭಾರತ ಎ ತಂಡ ಹಾಗೂ ದುಲೀಪ್ ಟ್ರೋಫಿ ತಂಡಗಳಿಗೂ ಕೋಚಿಂಗ್ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News