ರಿಯಲ್ ಮ್ಯಾಡ್ರಿಡ್‌ಗೆ ‘ಹ್ಯಾಟ್ರಿಕ್’ ಕ್ಲಬ್ ವಿಶ್ವಕಪ್
ಅಬುಧಾಬಿ, ಡಿ.23: ಲುಕಾ ಮಾಡ್ರಿಕ್ ಹಾಗೂ ಸೆರ್ಗಿಯೊ ರಾಮೊಸ್ ಸಾಹಸದಿಂದ ರಿಯಲ್ ಮ್ಯಾಡ್ರಿಡ್ ತಂಡ ಸತತ ಮೂರನೇ ಬಾರಿ ಪ್ರತಿಷ್ಠಿತ ಕ್ಲಬ್ ವಿಶ್ವಕಪ್‌ನ್ನು ಮುಡಿಗೇರಿಸಿಕೊಂಡು ದಾಖಲೆ ನಿರ್ಮಿಸಿದೆ.
ಶನಿವಾರ ಇಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮ್ಯಾಡ್ರಿಡ್ ತಂಡ ಆತಿಥೇಯ ಅಲ್‌ಐನ್ ಎಫ್‌ಸಿ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸಿ ಸತತ ಮೂರನೇ ಬಾರಿ ಮಿರುಗುವ ಟ್ರೋಫಿಗೆ ಮುತ್ತಿಟ್ಟಿತು. ಮ್ಯಾಡ್ರಿಡ್ ಈ ಹಿಂದೆ 2014, 2016, 2017ರಲ್ಲಿ ಕ್ಲಬ್ ವಿಶ್ವಕಪ್ ಚಾಂಪಿಯನ್ ಆಗಿತ್ತು.
ಸ್ಪೇನ್‌ನ ದೈತ್ಯ ಫುಟ್ಬಾಲ್ ಕ್ಲಬ್ ಮ್ಯಾಡ್ರಿಡ್ ಇದೀಗ ನಾಲ್ಕನೇ ಬಾರಿ ಕ್ಲಬ್ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಬದ್ಧ ಎದುರಾಳಿ ಬಾರ್ಸಿಲೋನಕ್ಕಿಂತ ಒಂದು ಪ್ರಶಸ್ತಿ ಹೆಚ್ಚಿಗೆ ಗಳಿಸಿದೆ.
ಬ್ಯಾಲನ್ ಡಿ’ಒರ್ ಪ್ರಶಸ್ತಿ ವಿಜೇತ ಆಟಗಾರ ಮಾಡ್ರಿಕ್ 14ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 23ರ ಹರೆಯದ ಮಿಡ್ ಫೀಲ್ಡರ್ ಮಾರ್ಕಸ್ ಲೊರೆಂಟೆ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.
79ನೇ ನಿಮಿಷದಲ್ಲಿ ಗೋಲು ಗಳಿಸಿದ ರಾಮೊಸ್, ಮ್ಯಾಡ್ರಿಡ್ ಮುನ್ನಡೆಯನ್ನು 3-0ಗೆ ಏರಿಸಿದರು. ಜಪಾನ್‌ನ ಮಿಡ್‌ಫೀಲ್ಡರ್ ಶಿಯೊಟನಿ 86ನೇ ನಿಮಿಷದಲ್ಲಿ ಅಲ್‌ಐನ್ ಎಫ್‌ಸಿ ಪರ ಸಮಾಧಾನಕರ ಗೋಲು ಬಾರಿಸಿದರು.
13 ಪಂದ್ಯಗಳಲ್ಲಿ 11ನೇ ಜಯ ದಾಖಲಿಸಿರುವ ಮ್ಯಾಡ್ರಿಡ್ ತಂಡ ಸ್ಯಾಂಟಿಯಾಗೊ ಸೊಲಾರಿ ಮಾರ್ಗದರ್ಶನದಲ್ಲಿ ಮೊದಲ ಬಾರಿ ಪ್ರಶಸ್ತಿ ಜಯಿಸಿದೆ. ಸೊಲಾರಿ ಅಕ್ಟೋಬರ್‌ನಲ್ಲಿ ಕೋಚ್ ಹುದ್ದೆವಹಿಸಿಕೊಂಡಿದ್ದರು.