×
Ad

ಆಸ್ಟ್ರೇಲಿಯದ ಮೂರನೇ ಟೆಸ್ಟ್ ತಂಡಕ್ಕೆ ಏಳರ ಬಾಲಕ ಸೇರ್ಪಡೆ

Update: 2018-12-23 17:20 IST

ಮೆಲ್ಬೋರ್ನ್, ಡಿ.23: ಏಳರ ಪೋರ ಆರ್ಚಿ ಶಿಲ್ಲರ್ ಪಾಲಿಗೆ ಈ ವರ್ಷದ ಕ್ರಿಸ್‌ಮಸ್ ಬೇಗನೆ ಆಗಮಿಸಿದೆ. ಭಾರತ ವಿರುದ್ಧ ಡಿ.26 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ(ಎಂಸಿಜಿ)ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ ಎಂದೇ ಕರೆಯಲ್ಪಡುವ ಮೂರನೇ ಟೆಸ್ಟ್‌ಗೆ ಆಸ್ಟ್ರೇಲಿಯ  ತನ್ನ 15 ಸದಸ್ಯರನ್ನು ಒಳಗೊಂಡ ತಂಡದಲ್ಲಿ ಬಾಲಕ ಶಿಲ್ಲರ್‌ಗೆ ಸ್ಥಾನ ನೀಡಿದೆ. ಮೇಕ್-ಎ-ವಿಶ್ ಆಸ್ಟ್ರೇಲಿಯ ಫೌಂಡೇಶನ್‌ನಿಂದಾಗಿ ಇದು ಸಾಧ್ಯವಾಗಿದೆ.

  ಶಿಲ್ಲರ್ ಮೂರು ತಿಂಗಳ ಮಗುವಾಗಿದ್ದಾಗಲೇ ದೋಷಯುಕ್ತ ಹೃದಯ ಕವಾಟ ಇರುವುದು ಪತ್ತೆಯಾಗಿತ್ತು. ಈತ ಈಗಾಗಲೇ ಹಲವಾರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಆತನ ಆರೋಗ್ಯ ಸ್ಥಿತಿಯು ಸ್ನೇಹಿತರೊಂದಿಗೆ ಪ್ರತಿನಿತ್ಯವೂ ಮುಕ್ತವಾಗಿ ಆಡಲು ಅವಕಾಶ ನೀಡುತ್ತಿಲ್ಲ. ಹೀಗಾಗಿ ಈ ಬಾಲಕ ಪ್ರತಿನಿತ್ಯ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆರ್ಚಿಗೆ ಸಾಧ್ಯವಾದಾಗಲೆಲ್ಲಾ ಕ್ರಿಕೆಟ್ ಆಡುವುದೆಂದರೆ ತುಂಬಾ ಇಷ್ಟ.

ಕ್ರಿಕೆಟ್ ಪ್ರೇಮಿ ಆರ್ಚಿ ಬಳಿ ಅವರ ತಂದೆ ನೀನು ಮುಂದೇನಾಗಲು ಇಷ್ಟಪಡುತ್ತೀಯಾ? ಎಂದು ಕೇಳಿದಾಗ ಆತ ನಾನು ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕನಾಗಲು ಬಯಸುತ್ತೇನೆ ಎಂದು ಉತ್ತರಿಸಿದ್ದನಂತೆ.

ಆರ್ಚಿ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಮೇಕ್-ಎ-ವಿಶ್ ಆಸ್ಟ್ರೇಲಿಯ ಫೌಂಡೇಶನ್ ಆರ್ಚಿಯ ಹೃದಯದ ಸ್ಥಿತಿ-ಗತಿ ಹಾಗೂ ಆತನ ಆಕಾಂಕ್ಷೆಯ ಬಗ್ಗೆ ತಿಳಿದುಕೊಂಡಿತ್ತು.

 ಎಂಸಿಜಿ ಟೆಸ್ಟ್‌ನಲ್ಲಿ ತನ್ನೊಂದಿಗೆ ಆರ್ಚಿ ಕೂಡ ಸಹ-ನಾಯಕನಾಗಿರುತ್ತಾನೆ ಎಂದು ಆಸ್ಟ್ರೇಲಿಯದ ನಾಯಕ ಟಿಮ್ ಪೈನ್ ಯರ್ರಾ ಪಾರ್ಕ್‌ನಲ್ಲಿ ನಡೆದ ಫ್ಯಾಮಿಲಿ ಡೇ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

  ಮೂರನೇ ಟೆಸ್ಟ್ ತಂಡಕ್ಕೆ ಶಿಲ್ಲರ್ರನ್ನು ಸೇರ್ಪಡೆಗೊಳಿಸುವ ವಿಚಾರವನ್ನು ಈ ತಿಂಗಳಾರಂಭದಲ್ಲೇ ಬಹಿರಂಗಪಡಿಸಲಾಗಿತ್ತು. ಆಸ್ಟ್ರೇಲಿಯದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್, ಬಾಲಕನಿಗೆ ದೂರವಾಣಿ ಕರೆ ಮಾಡಿ ತಂಡಕ್ಕೆ ಸೇರ್ಪಡೆಗೊಳಿಸುವ ಸುದ್ದಿಯನ್ನು ತಿಳಿಸಿದ್ದರು.

‘‘ಆತ(ಆರ್ಚಿ)ಕಠಿಣ ಸಮಯವನ್ನು ಎದುರಿಸಿದ್ದು, ತನ್ನ ಜೀವನದ ಹೆಚ್ಚಿನ ಸಮಯವನ್ನು ಆಸ್ಪತ್ರೆಯ ಬೆಡ್‌ನಲ್ಲೇ ಕಳೆದಿದ್ದಾನೆ. ಆತನ ಮುಖದಲ್ಲಿ ಮಂದಹಾಸ ಮೂಡಿಸುವ ನಿಟ್ಟಿನಲ್ಲಿ ನಾವು ನೆರವಾಗಲಿದ್ದೇವೆ. ನಾನು ಆತನಿಗಾಗಿ ಮಾಡಬಹುದಾದ ಸಣ್ಣ ನೆರವು ಇದಾಗಿದೆ’’ ಎಂದು ಲ್ಯಾಂಗರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News