ಮೆಲ್ಬೋರ್ನ್ ಜಯಭೇರಿ ಬಳಿಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯದ ವೀಕ್ಷಕ ವಿವರಣೆಗಾರರಿಗೆ ತಿರುಗೇಟು ನೀಡಿದ್ದು ಹೀಗೆ…. !
ಮೆಲ್ಬೋರ್ನ್ , ಡಿ.30: ಆಸ್ಟ್ರೇಲಿಯ ವಿರುದ್ಧ ಟೀಮ್ ಇಂಡಿಯಾ ಮೂರನೇ ಕ್ರಿಕೆಟ್ ಟೆಸ್ಟ್ ನಲ್ಲಿ ರವಿವಾರ 137 ರನ್ ಗಳ ಜಯ ಗಳಿಸಿದ್ದು, ನಾಲ್ಕು ಟೆಸ್ಟ್ ಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಭಾರತಕ್ಕೆ ಈ ಗೆಲುವಿಗೆ ದೇಶೀಯ ಕ್ರಿಕೆಟ್ ನೆರವಾಗಿದೆ ಎಂದು ನಾಯಕ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯದ ವೀಕ್ಷಕ ವಿವರಣೆಗಾರರಾದ ಕೆರ್ರಿ ಓ ಕೀಫೆ ಮತ್ತು ಮಾರ್ಕ್ ವಾ ಅವರು ಭಾರತ ತಂಡದ ಪ್ರದರ್ಶನದ ಬಗ್ಗೆ ಲಘವಾಗಿ ಮಾತನಾಡಿದಕ್ಕೆ ಕೊಹ್ಲಿ ತಿರುಗೇಟು ನೀಡಿದ್ದಾರೆ.
“ ನಮ್ಮ ಪ್ರಥಮ ದರ್ಜೆ ಕ್ರಿಕೆಟ್ ಅಪೂರ್ವವಾಗಿದೆ. ಈ ಕಾರಣದಿಂದಾಗಿ ನಮಗೆ ಗೆಲುವು ಸಾಧ್ಯವಾಗಿದೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ನೀಡಿದ ಪ್ರದರ್ಶನ ಟೀಮ್ ಇಂಡಿಯಾದ ಗೆಲುವಿಗೆ ನೆರವಾಗಿದೆ. ಭಾರತದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಬೌಲರ್ ಗಳಿಗೆ ಸವಾಲಾಗಿದೆ. ಬೌಲರ್ ಗಳಿಗೆ ಇಲ್ಲಿನ ಪ್ರದರ್ಶನ ವಿದೇಶದಲ್ಲಿ ಮಿಂಚಲು ನೆರವಾಗುತ್ತದೆ ಎಂದು ನಾಯಕ ಕೊಹ್ಲಿ ಹೇಳಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ವೇಗಿ ಜಸ್ ಪ್ರೀತ್ ಬುಮ್ರಾ 86ಕ್ಕೆ 9 ವಿಕೆಟ್ ಗಳಿಸಿದ್ದಾರೆ. ಅವರ ಸಾಧನೆಗೆ ರಣಜಿ ಟ್ರೋಫಿ ಕ್ರಿಕೆಟ್ ನೆರವಾಗಿದೆ.
“ ನಾವು ಕಠಿಣ ಅಭ್ಯಾಸ ನಡೆಸುತ್ತೇವೆ. ರಣಜಿ ಟ್ರೋಫಿಯಲ್ಲಿ ಅಭ್ಯಾಸಕ್ಕೆ ಉತ್ತಮ ಅವಕಾಶ ದೊರೆಯುತ್ತದೆ ಎಂದು ಬುಮ್ರಾ ಹೇಳಿದ್ದಾರೆ.
ಮಾಯಾಂಕ್ ಅಗರ್ ವಾಲ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ತ್ರಿಶತಕ ದಾಖಲಿಸಿದ್ದರು. ಟೆಸ್ಟ್ ನ ಮೊದಲ ದಿನ ಮಾಯಾಂಕ್ ಅಗರ್ ವಾಲ್ ಅವರು ಹನುಮ ವಿಹಾರಿ ಜೊತೆ ಇನಿಂಗ್ಸ್ ಆರಂಭಿಸುವ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಅವರ ಆಟದ ಬಗ್ಗೆ ಓ ಕೀಫೆ ಅವರು ಟೀಕಿಸಿದ್ದರು.