ನಾಯಕನಾಗಿ ವಿದೇಶದಲ್ಲಿ ಗರಿಷ್ಠ ಗೆಲುವು: ಗಂಗುಲಿ ದಾಖಲೆ ಸರಿಗಟ್ಟಿದ ಕೊಹ್ಲಿ

Update: 2018-12-30 15:01 GMT

ಹೊಸದಿಲ್ಲಿ, ಡಿ.30: ಆಸ್ಟ್ರೇಲಿಯ ವಿರುದ್ಧ ಅದರದೇ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿದ ಭಾರತದ ಮೊದಲ ನಾಯಕ ಎನಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿರುವ ನಾಯಕ ವಿರಾಟ್ ಕೊಹ್ಲಿ ಮೆಲ್ಬೋರ್ನ್‌ನ ಎಂಸಿಜಿಯಲ್ಲಿ ರವಿವಾರ 3ನೇ ಟೆಸ್ಟ್‌ನಲ್ಲಿ 137 ರನ್ ಅಂತರದ ಜಯ ಸಾಧಿಸಿ ತನ್ನ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.

ನಾಯಕನಾಗಿ ವಿದೇಶದಲ್ಲಿ ಗರಿಷ್ಠ ಗೆಲುವು ಸಾಧಿಸಿದ ಸೌರವ್ ಗಂಗುಲಿ ದಾಖಲೆಯೊಂದನ್ನು ಕೊಹ್ಲಿ ಸರಿಗಟ್ಟಿದ್ದಾರೆ. ಕೊಹ್ಲಿ ವಿದೇಶದಲ್ಲಿ ಈ ತನಕ 24 ಟೆಸ್ಟ್ ಪಂದ್ಯಗಳ ನಾಯಕತ್ವವಹಿಸಿಕೊಂಡು 11 ಬಾರಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಗಂಗುಲಿ ವಿದೇಶದಲ್ಲಿ 28 ಟೆಸ್ಟ್ ಪಂದ್ಯಗಳಲ್ಲಿ ನಾಯಕನಾಗಿ ತಂಡಕ್ಕೆ 11 ಬಾರಿ ಗೆಲುವು ತಂದಿದ್ದಾರೆ.

ಎಂಎಸ್ ಧೋನಿ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಧೋನಿ ವಿದೇಶ ನೆಲದಲ್ಲಿ 30 ಟೆಸ್ಟ್ ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿದ್ದಾರೆ.

ವಿದೇಶದಲ್ಲಿ ನಾಯಕನಾಗಿ 17 ಟೆಸ್ಟ್‌ನಲ್ಲಿ 5 ಜಯ ಸಾಧಿಸಿರುವ ರಾಹುಲ್ ದ್ರಾವಿಡ್ ನಾಲ್ಕನೇ ಯಶಸ್ವಿ ನಾಯಕನಾಗಿದ್ದಾರೆ.

ನಾಯಕನಾಗಿ ಟಾಸ್ ಗೆದ್ದ ಪಂದ್ಯದಲ್ಲಿ ಕೊಹ್ಲಿ ದಾಖಲೆ ಗಮನಾರ್ಹವಾಗಿದೆ. ಕೊಹ್ಲಿ 21 ಟೆಸ್ಟ್‌ನಲ್ಲಿ ಟಾಸ್ ಜಯಿಸಿದ್ದು, ಈ ಪೈಕಿ 18ರಲ್ಲಿ ಜಯ, 3 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ. ವಿದೇಶದಲ್ಲಿ ಕೊಹ್ಲಿ 9 ಟೆಸ್ಟ್‌ನಲ್ಲಿ ಟಾಸ್ ಜಯಿಸಿದ್ದು, ಇದರಲ್ಲಿ ಭಾರತ 8ರಲ್ಲಿ ಗೆಲುವು ಹಾಗೂ ಒಂದು ಪಂದ್ಯ ಡ್ರಾ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News