ಸಿರಿಯ ಸಂಘರ್ಷ: 2018ರಲ್ಲಿ ಅತಿ ಕಡಿಮೆ ಸಾವು-ನೋವು

Update: 2018-12-31 17:39 GMT

ಬೈರೂತ್,ಡಿ.31: ಎಂಟು ವರ್ಷಗಳಿಂದ ಸಿರಿಯದಲ್ಲಿ ತಾಂಡವವಾಡುತ್ತಿರುವ ಭೀಕರ ಸಂಘರ್ಷವು 2018ರಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಸಾವುನೋವುಗಳನ್ನು ಕಂಡಿದೆಯೆಂದು ಅಂತಾರಾಷ್ಟ್ರೀಯ ಯುದ್ಧ ಕಣ್ಗಾವಲು ಸಂಸ್ಥೆಯೊಂದು ವರದಿ ಮಾಡಿದೆ.

 ಸಿರಿಯದಲ್ಲಿ ಭುಗಿಲೆದ್ದಿರುವ ಸಂಘರ್ಷದಿಂದಾಗಿ 2018ರಲ್ಲಿ ಒಟ್ಟು 19,666 ಮಂದಿ ಸಾವನ್ನಪ್ಪಿದ್ದಾರೆಂದು ‘ ಸಿರಿಯನ್ ಆಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್’ ಸಂಸ್ಥೆ ತಿಳಿಸಿದೆ. 2011ರಲ್ಲಿ ಸಿರಿಯದಲ್ಲಿ ಸಂಷರ್ಷ ಆರಂಭಗೊಂಡಾಗಿನಿಂದ ಈ ವರ್ಷ ಅತ್ಯಂತ ಕನಿಷ್ಠ ಸಾವುನೋವು ಸಂಭವಿಸಿದೆಯೆಂದು ಅದು ಹೇಳಿದೆ.

   ಕಳೆದ ವರ್ಷ ಸಿರಿಯ ಯುದ್ಧದಲ್ಲಿ 33 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. 2014ರಲ್ಲಿ ಅತ್ಯಂತ ಗರಿಷ್ಠ ಅಂದರೆ 76 ಸಾವಿರ ಮಂದಿ ಸಿರಿಯ ಯುದ್ದದಲ್ಲಿ ಮೃತಪಟ್ಟಿದ್ದಾರೆಂದು ಬ್ರಿಟನ್ ಮೂಲದ ಈ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

  ಅಧ್ಯಕ್ಷ ಬಶರ್ ಅಸಾದ್‌ ಬೆಂಬಲಿತ ಸೇನಾಪಡೆಗಳು, ಐಸಿಸ್ ಮತ್ತಿತತರ ಬಂಡುಕೋರ ಉಗ್ರರ ಜೊತೆಗೆ ಭೀಕರ ಕಾಳಗದಲ್ಲಿ ತೊಡಗಿವೆ.

2018ರಲ್ಲಿ ಮೃತಪಟ್ಟವರ ಪೈಕಿ 6349 ಮಂದಿ ನಾಗರಿಕರಾಗಿದ್ದು, ಅವರಲ್ಲಿ 1437 ಮಂದಿ ಮಕ್ಕಳೆಂದು ‘ ಸಿರಿಯನ್ ಆಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್’ನ ವಕ್ತಾರ ಅಬ್ದೆಲ್ ರಹ್ಮಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News