ಗವಾಸ್ಕರ್, ಪೃಥ್ವಿ ಶಾ ಎಲೈಟ್ ಪಟ್ಟಿಗೆ ಮಾಯಾಂಕ್
Update: 2019-01-03 23:29 IST
ಸಿಡ್ನಿ,ಜ.3: ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿರುವ ಮಾಯಾಂಕ್ ಅಗರ್ವಾಲ್ ಭಾರತದ ಬ್ಯಾಟಿಂಗ್ ದಂತಕತೆ ಸುನೀಲ್ ಗವಾಸ್ಕರ್ ಹಾಗೂ ಮುಂಬೈನ ಪ್ರತಿಭಾವಂತ ಯುವ ಆಟಗಾರ ಪೃಥ್ವಿ ಶಾ ಅವರನ್ನೊಳಗೊಂಡ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಆಸೀಸ್ ವಿರುದ್ಧ 4ನೇ ಟೆಸ್ಟ್ ನಲ್ಲಿ 112 ಎಸೆತಗಳಲ್ಲಿ 77 ರನ್ ಗಳಿಸುವುದರೊಂದಿಗೆ ಮಾಯಾಂಕ್ ಈ ಪಟ್ಟಿಗೆ ಸೇರಿದ್ದಾರೆ. ವೃತ್ತಿಜೀವನದ ಮೊದಲ 3 ಟೆಸ್ಟ್ ಇನಿಂಗ್ಸ್‌ಗಳಲ್ಲಿ 2ನೇ ಬಾರಿ ಅರ್ಧಶತಕ ಸಿಡಿಸಿದ ಮಾಯಾಂಕ್, ಗವಾಸ್ಕರ್ ಹಾಗೂ ಶಾ ಬಳಿಕ ಈ ಸಾಧನೆ ಮಾಡಿದ ಭಾರತದ 3ನೇ ಆರಂಭಿಕ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. 27ರ ಹರೆಯದ ಮಾಯಾಂಕ್ ಆಸ್ಟ್ರೇಲಿಯದಲ್ಲಿ ಕನಿಷ್ಠ 2 ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಭಾರತದ 8ನೇ ಆರಂಭಿಕ ಆಟಗಾರ ನಾಗಿದ್ದಾರೆ.