140 ‘ತಪ್ಪು, ಮಾನಹಾನಿಕರ’ ಸಂಗತಿಗಳನ್ನು ವರದಿ ಮಾಡಬೇಡಿ: ಪತ್ರಕರ್ತರಿಗೆ ವಿಕಿಲೀಕ್ಸ್ ಸೂಚನೆ

Update: 2019-01-07 16:56 GMT

ಲಂಡನ್, ಜ. 7: ತನ್ನ ಸ್ಥಾಪಕ ಜೂಲಿಯನ್ ಅಸಾಂಜ್ ಕುರಿತ 140 ವಿವಿಧ ‘ತಪ್ಪು ಮತ್ತು ಮಾನಹಾನಿಕರ’ ಸಂಗತಿಗಳನ್ನು ವರದಿ ಮಾಡದಂತೆ ಸರಕಾರಗಳ ಗುಪ್ತ ಮಾಹಿತಿಗಳನ್ನು ಸೋರಿಕೆ ಮಾಡುವ ವೆಬ್‌ಸೈಟ್ ‘ವಿಕಿಲೀಕ್ಸ್’, ಪತ್ರಕರ್ತರನ್ನು ರವಿವಾರ ಕೋರಿದೆ.

ಅಸಾಂಜ್ ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ 2012 ಜೂನ್‌ನಿಂದ ಅಡಗಿಕೊಂಡಿದ್ದಾರೆ. ಸ್ವೀಡನ್‌ನಲ್ಲಿ ಅವರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಆಕ್ರಮಣ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಬಂಧನದಿಂದ ಪಾರಾಗಲು ಅವರು ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ.

ರಾಯಭಾರ ಕಚೇರಿಯಿಂದ ಹೊರಬಂದರೆ, ಬ್ರಿಟನ್ ತನ್ನನ್ನು ಬಂಧಿಸಿ ಅಮೆರಿಕಕ್ಕೆ ಗಡಿಪಾರು ಮಾಡಬಹುದು ಎಂಬ ಭೀತಿಯನ್ನು ಅವರು ಹೊಂದಿದ್ದಾರೆ.

ಅಮೆರಿಕವು ತನ್ನ ಮಿತ್ರದೇಶಗಳೂ ಸೇರಿದಂತೆ ಜಗತ್ತಿನ ದೇಶಗಳ ವಿರುದ್ಧ ಬೇಹುಗಾರಿಕೆ ನಡೆಸುತ್ತಿರುವುದಕ್ಕೆ ಸಂಬಂಧಿಸಿದ ಸರಕಾರಿ ಮಾಹಿತಿಗಳನ್ನು ಸೋರಿಕೆ ಮಾಡುವ ಮೂಲಕ ಅಸಾಂಜ್ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿರುವುದನ್ನು ಸ್ಮರಿಸಬಹುದಾಗಿದೆ.

ಅಸಾಂಜ್ ಬಗ್ಗೆ ತಪ್ಪು ಮಾಹಿತಿ ಹರಡುವ ವಾತಾವರಣ

ಮಾಧ್ಯಮ ಸಂಸ್ಥೆಗಳಿಗೆ ಸಲಹೆ ನೀಡಲು ವಿಕಿಲೀಕ್ಸ್‌ಗೆ ಪ್ರೇರಣೆ ನೀಡಿದ ಅಂಶ ಯಾವುದು ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲವಾದರೂ, ಅಸಾಂಜ್ ಬಗ್ಗೆ ತಪ್ಪು ವರದಿಯನ್ನು ಪ್ರಕಟಿಸಿದೆ ಎನ್ನಲಾದ ಬ್ರಿಟನ್‌ನ ‘ಗಾರ್ಡಿಯನ್’ ಪತ್ರಿಕೆಯನ್ನು ಅದು ಮುಖ್ಯವಾಗಿ ಗುರಿಯಾಗಿಸಿದೆ.

‘‘ವಿಕಿಲೀಕ್ಸ್ ಮತ್ತು ಜೂಲಿಯನ್ ಅಸಾಂಜ್ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುವ ವಾತಾವರಣವೊಂದು ಸೃಷ್ಟಿಯಾಗಿದೆ. ಅವರ ಬಗ್ಗೆ ಉದ್ದೇಶಪೂರ್ವಕವಾಗಿ ಕಪೋಲಕಲ್ಪಿತ ಸಂಗತಿಗಳನ್ನು ದೊಡ್ಡ ಹಾಗೂ ‘ಪ್ರತಿಷ್ಠಿತ’ ಮಾಧ್ಯಮಗಳಲ್ಲಿ ಹರಡಲಾಗುತ್ತಿದೆ’’ ಎಂದು ಮಾಧ್ಯಮಗಳಿಗೆ ಕಳುಹಿಸಿರುವ ಇಮೇಲ್‌ನಲ್ಲಿ ವಿಕಿಲೀಕ್ಸ್ ಹೇಳಿದೆ. ‘‘ಇದು ಗುಪ್ತ ಕಾನೂನು ಸಂವಹನ. ಪ್ರಕಟನೆಗಾಗಿ ಅಲ್ಲ’’ ಎಂಬುದಾಗಿಯೂ ಇಮೇಲ್‌ನಲ್ಲಿ ಸೂಚಿಸಲಾಗಿದೆ.

5,000 ಪದಗಳ ಇಮೇಲ್‌ನಲ್ಲಿ ವಿಕಿಲೀಕ್ಸ್ 140 ಹೇಳಿಕೆಗಳನ್ನು ಪ್ರಸ್ತಾಪಿಸಿದ್ದು, ಅವುಗಳು ತಪ್ಪು ಹಾಗೂ ಮಾನಹಾನಿಕರ ಎಂದು ವಿಕಿಲೀಕ್ಸ್ ಹೇಳಿದೆ. ‘ಅಸಾಂಜ್ ಯಾವತ್ತೂ ಯಾವುದೇ ಗುಪ್ತಚರ ಸಂಸ್ಥೆಯ ಏಜಂಟ್ ಅಥವಾ ಅಧಿಕಾರಿ ಆಗಿರಲಿಲ್ಲ’ ಎನ್ನುವುದು ಈ ಹೇಳಿಕೆಗಳ ಪೈಕಿ ಒಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News