ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ಹೊಸ ಎತ್ತರಕ್ಕೆ ಏರಿದ ರಿಷಭ್ ಪಂತ್

Update: 2019-01-08 10:36 GMT

ದುಬೈ, ಜ.8: ಭಾರತದ ಯವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಹೊಸ ಎತ್ತರಕ್ಕೆ ಏರಿದ್ದಾರೆ. ಭಾರತದ ಜಂಟಿ ಗರಿಷ್ಠ ರ‍್ಯಾಂಕಿನ ವಿಕೆಟ್‌ಕೀಪರ್ ಆಗಿ ಹೊರ ಹೊಮ್ಮಿದ್ದಾರೆ.

 ಆಸ್ಟ್ರೇಲಿಯದಲ್ಲಿ ಇತಿಹಾಸ ನಿರ್ಮಿಸಿದ ಸಂಭ್ರಮದಲ್ಲಿರುವ ಪಂತ್ 21 ಸ್ಥಾನ ಭಡ್ತಿ ಪಡೆದು 17ನೇ ಸ್ಥಾನಕ್ಕೇರಿದರು. 17ನೇ ರ‍್ಯಾಂಕ್ ಭಾರತದ ಸ್ಪೆಷಲಿಸ್ಟ್ ವಿಕೆಟ್‌ಕೀಪರ್‌ನ ಜಂಟಿ ಗರಿಷ್ಠ ಸಾಧನೆಯಾಗಿದೆ. 1973ರ ಜನವರಿಯಲ್ಲಿ ಫಾರೂಕ್ ಎಂಜಿನಿಯರ್ ಈ ಸಾಧನೆ ಮಾಡಿದ್ದರು.

ಪಂತ್ 673 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದು ಇದು ಭಾರತದ ವಿಕೆಟ್‌ಕೀಪರ್ ಗಳಿಸಿರುವ ಗರಿಷ್ಠ ಅಂಕವಾಗಿದೆ. ಧೋನಿ 662 ಅಂಕ ಗಳಿಸಿ 2ನೇ ಸ್ಥಾನದಲ್ಲೂ, ಫಾರೂಕ್ 619 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಧೋನಿಯ ಗರಿಷ್ಠ ಟೆಸ್ಟ್ ರ‍್ಯಾಂಕಿಂಗ್ 19.

2016ರಲ್ಲಿ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಕೇವಲ 18 ಎಸೆತಗಳಲ್ಲಿ 50 ರನ್ ಗಳಿಸುವುದರೊಂದಿಗೆ ಪಂತ್ ಬೆಳಕಿಗೆ ಬಂದಿದ್ದರು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ತಾನಾಡಿದ್ದ 9ನೇ ಟೆಸ್ಟ್ ಪಂದ್ಯದಲ್ಲಿ ಔಟಾಗದೆ 159 ರನ್ ಗಳಿಸಿದ ಹಿನ್ನೆಲೆಯಲ್ಲಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರ-20ರಲ್ಲಿ ಸ್ಥಾನ ಪಡೆದಿದ್ದಾರೆ.

 ಪಂತ್ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳುವ ಮೊದಲು 59ನೇ ರ‍್ಯಾಂಕಿನಲ್ಲಿದ್ದರು. ಸರಣಿಯಲ್ಲಿ ಒಟ್ಟು 350 ರನ್ ಹಾಗೂ 20 ಕ್ಯಾಚ್ ಪಡೆದು ವೇಗವಾಗಿ ಪ್ರಗತಿ ಸಾಧಿಸಿದ ಪಂತ್ ರ‍್ಯಾಂಕಿಂಗ್‌ನಲ್ಲಿ ಭಾರೀ ಏರಿಕೆ ಕಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News