ಬರೋಡಾ ವಿರುದ್ಧ ಹೋರಾಡಿ ಮಣಿದ ಕರ್ನಾಟಕ
► ಆತಿಥೇಯರಿಗೆ 2 ವಿಕೆಟ್‌ಗಳ ರೋಚಕ ಜಯ
► ಸಿದ್ಧಾರ್ಥ್, ಪಾಂಡೆ ಅರ್ಧಶತಕ ವ್ಯರ್ಥ
► ಭಾರ್ಗವ್, ಹೂಡಾ ಅಮೋಘ ಬೌಲಿಂಗ್
ವಡೋದರಾ, ಜ.8: ಕೊನೆಯ ಕ್ಷಣದವರೆಗೆ ರೋಚಕತೆಯನ್ನು ಉಳಿಸಿಕೊಂಡಿದ್ದ ರಣಜಿ ಪಂದ್ಯದಲ್ಲಿ ಬರೋಡಾ ತಂಡಕ್ಕೆ ಕರ್ನಾಟಕ 2 ವಿಕೆಟ್‌ಗಳಿಂದ ಮಣಿದಿದೆ. ಕ್ವಾರ್ಟರ್ ಫೈನಲ್ ತಲುಪುವ ಸಾಧ್ಯತೆ ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ.
110 ರನ್‌ಗಳ ಗೆಲುವಿನ ಗುರಿ ಪಡೆದ ಬರೋಡಾ ತಂಡ 8 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಪಂದ್ಯ ಕೇವಲ ಎರಡೇ ದಿನಗಳಲ್ಲಿ ಫಲಿತಾಂಶ ಕಂಡಿದ್ದು ಪಿಚ್ ಕಳಪೆಯಾಗಿದ್ದಕ್ಕೆ ಸಾಕ್ಷಿಯಾಗಿತ್ತು.
ಇಲ್ಲಿಯ ಮೋತಿಭಾಗ್ ಕ್ರೀಡಾಂಗಣದಲ್ಲಿ ನಡೆದ ರಣಜಿ ‘ಎ’ ಗುಂಪಿನ ಪಂದ್ಯದ ಪ್ರಥಮ ದಿನವಾದ ಸೋಮವಾರ ಕರ್ನಾಟಕ ತನ್ನ ಎರಡನೇ ಇನಿಂಗ್ಸ್ ನಲ್ಲಿ 13ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿತ್ತು. ಮಂಗಳವಾರ ಎರಡನೇ ದಿನದಾಟ ಆರಂಭಿಸಿದ ಪಾಂಡೆ ಬಳಗಕ್ಕೆ ಸಿದ್ಧಾರ್ಥ್ ಭರ್ಜರಿ ಅರ್ಧಶತಕ (64) ಗಳಿಸಿ ಆಸರೆಯಾದರು. ಅವರಿಗೆ ತಕ್ಕ ಸಾಥ್ ನೀಡಿದ ಮನೀಷ್ ಪಾಂಡೆ ಬರೋಬ್ಬರಿ ಅರ್ಧಶತಕ(50) ಸಿಡಿಸಿ ತಂಡವನ್ನು ಆಪತ್ತ್ತಿನಿಂದ ಪಾರು ಮಾಡುವ ಕೆಲಸ ಮಾಡಿದರು. ಆದರೆ ಇತರ ಆಟಗಾರರಿಂದ ನಿರೀಕ್ಷಿತ ಬೆಂಬಲ ಅವರಿಗೆ ದೊರೆಯಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ನಿಶ್ಚಲ್(16), ಶ್ರೇಯಸ್ ಗೋಪಾಲ್(29), ವಿಕೆಟ್ ಕೀಪರ್ ದಾಂಡಿಗ ಬಿ.ಆರ್. ಶರತ್(22) ಹಾಗೂ ಜೆ.ಸುಚಿತ್(ಅಜೇಯ 18) ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾದರೂ ಗೆಲುವಿಗೆ ಇದು ಸಾಕಾಗಲಿಲ್ಲ. ಕರ್ನಾಟಕ ತಂಡದ ಅಗ್ರ ಐವರು ದಾಂಡಿಗರು ಭಾರ್ಗವ್ ಭಟ್(116ಕ್ಕೆ 5)ಅವರ ಎಡಗೈ ಸ್ಪಿನ್ ದಾಳಿಗೆ ವಿಕೆಟ್ ಒಪ್ಪಿಸಿದರೆ, ಇನ್ನುಳಿದ ಕೆಳ ಕ್ರಮಾಂಕದ ಐವರು ಆಟಗಾರರು ದೀಪಕ್ ಹೂಡಾ (31ಕ್ಕೆ5)ಅವರ ಬಲಗೈ ಸ್ಪಿನ್‌ಗೆ ಮಣಿದರು. ಅಂತಿಮವಾಗಿ ಕರ್ನಾಟಕ ತನ್ನ ಎರಡನೇ ಇನಿಂಗ್ಸ್ ನಲ್ಲಿ 220 ರನ್ ಗಳಿಸಿ ಎಲ್ಲ ವಿಕೆಟ್‌ಗಳನ್ನು ಕೈಚೆಲ್ಲಿತು. ಬರೋಡಾ ಗೆಲುವಿಗೆ 110 ರನ್ ಗೆಲುವಿನ ಗುರಿ ನೀಡಿತು. ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಬರೋಡಾಗೆ ಅಷ್ಟು ಸುಲಭವಾಗಿ ಜಯ ಸಾಧಿಸಲು ಕರ್ನಾಟಕ ಬೌಲರ್‌ಗಳು ಅವಕಾಶ ಮಾಡಿಕೊಡಲಿಲ್ಲ. ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಬರೋಡಾಗೆ ರಾಷ್ಟ್ರೀಯ ತಂಡದ ಆಟಗಾರ ಯೂಸುಫ್ ಪಠಾಣ್(41) ಆಸರೆಯಾದರು. ಅವರ ಸಮಯೋಚಿತವಾದ ಆಟ ತಂಡಕ್ಕೆ ಸಹಕಾರಿಯಾಯಿತು. ವಿಷ್ಣು ಸೋಲಂಕಿ(20) ಹಾಗೂ ಕೊನೆಯಲ್ಲಿ ರಿಷಿ ಅರೋಧೆ(12) ಬರೋಡಾ ಜಯಕ್ಕೆ ಮುನ್ನುಡಿ ಬರೆದರು. ಒಂದು ಹಂತದಲ್ಲಿ 90 ರನ್‌ಗೆ 8 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿದ್ದ ಆತಿಥೇಯ ತಂಡಕ್ಕೆ 9ನೇ ವಿಕೆಟ್‌ನ ಮುರಿಯದ ಜೊತೆಯಾಟದಲ್ಲಿ ಭಾರ್ಗವ್ ಭಟ್(9) ಹಾಗೂ ರಿಷಿ ಅರೋಧೆ ಅಮೂಲ್ಯ 20 ರನ್‌ಗಳನ್ನು ಸೇರಿಸಿ ಜಯದ ಹಾದಿಯನ್ನು ಸುಲಭಗೊಳಿಸಿದರು. ಕೊನೆಯಲ್ಲಿ ಪಾಂಡೆ ಬಳಗಕ್ಕೆ ನಿರಾಶೆ ತಪ್ಪಲಿಲ್ಲ.
ಕರ್ನಾಟಕದ ಪರ ಪ್ರಸಿದ್ಧ್ ಕೃಷ್ಣ (3 ವಿಕೆಟ್), ರೋನಿತ್ ಮೋರೆ ಹಾಗೂ ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಪಡೆದರು.