ಏಶ್ಯಕಪ್ ಫುಟ್ಬಾಲ್: ಉತ್ಸಾಹಿ ಭಾರತಕ್ಕೆ ಇಂದು ಯುಎಇ ಸವಾಲು
ಅಬುಧಾಬಿ, ಜ.9: ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಉತ್ಸಾಹದ ಅಲೆಯಲ್ಲಿ ತೇಲುತ್ತಿರುವ ಭಾರತ ಫುಟ್ಬಾಲ್ ತಂಡಕ್ಕೆ ಗುರುವಾರ ಎಎಫ್‌ಸಿ ಏಶ್ಯಕಪ್ ಫುಟ್ಬಾಲ್ ಟೂರ್ನಿಯ ‘ಎ’ಗುಂಪಿನಲ್ಲಿ ಆತಿಥೇಯ ಯುಎಇ ಸವಾಲು ಎದುರಾಗಿದೆ. ಇಲ್ಲಿಯ ಝಾಯೆದ್ ಸ್ಪೋರ್ಟ್ಸ್ ಸಿಟಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ನಾಲ್ಕು ದಿನಗಳ ಹಿಂದೆ ಥಾಯ್ಲೆಂಡ್‌ನು 4-1 ಗೋಲುಗಳ ಅಂತರದಿಂದ ಬಗ್ಗುಬಡಿದಿರುವ ಚೆಟ್ರಿ ಬಳಗ ಥಾಯ್ಲೆಂಡ್‌ಗಿಂತ ಉನ್ನತ ಮಟ್ಟದ ರ್ಯಾಂಕಿನ ಯುಎಇ ತಂಡದ ಸವಾಲನ್ನು ಮೆಟ್ಟಿ ನಿಲ್ಲುವುದೇ ಎಂದು ಕಾದುನೋಡಬೇಕಿದೆ. ಇದೇ ವೇಳೆ ಯುಎಇ ತಂಡ ಕಪ್‌ನ ಮೇಲೆ ಕಣ್ಣಿಟ್ಟಿದ್ದು ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಯುಎಇ ವಿಶ್ವ ರ್ಯಾಂಕಿಂಗ್‌ನಲ್ಲಿ 79ನೇ ಸ್ಥಾನದಲ್ಲಿದ್ದರೆ, ಭಾರತ 97ನೇ ರ್ಯಾಂಕ್‌ನಲ್ಲಿದೆ.
ಭಾರತ ತಂಡದ ಕೋಚ್ ಸ್ಟೀಫನ್ ಕಾನ್‌ಸ್ಟಂಟೈನ್ ತಂಡದ ಕಳೆದ ಪಂದ್ಯದ ಗೆಲುವಿನಿಂದ ಸಂತಸಗೊಂಡಿದ್ದು, ಅದರಲ್ಲೂ ಪಂದ್ಯದ ದ್ವಿತೀಯಾರ್ಧದಲ್ಲಿ ತೋರಿದ ಪ್ರದರ್ಶನ ಹಾಗೂ ದಾಳಿಯಲ್ಲಿ ಶೀಘ್ರ ಬದಲಾವಣೆಗಳನ್ನು ತಂದಿದ್ದು ಹೆಚ್ಚು ಖುಷಿ ನೀಡಿದೆ.
‘‘ನಮ್ಮಲ್ಲಿ ಉತ್ಸಾಹಿ ಯುವ ಪಡೆಯಿದೆ. ಆದಾಗ್ಯೂ ಯುಎಇ ವಿಭಿನ್ನ ಆಟದ ಮಾದರಿಯನ್ನು ಹೊಂದಿದೆ. ಯುಎಇ ಒಂದು ಉತ್ತಮ ತಂಡವಾಗಿದ್ದರೂ, ನಮಗೆ ಅದು ಮತ್ತೊಂದು ಎದುರಾಳಿ ಅಷ್ಟೇ’’ ಎಂದು ಕೋಚ್ ಕಾನ್‌ಸ್ಟಂಟೈನ್ ಹೇಳಿದ್ದಾರೆ.
ಥಾಯ್ಲೆಂಡ್ ವಿರುದ್ಧ ಅವಳಿ ಗೋಲುಗಳನ್ನು ಬಾರಿಸಿ ಅತ್ಯುತ್ಸಾಹದಲ್ಲಿರುವ ನಾಯಕ ಸುನೀಲ್ ಚೆಟ್ರಿಯನ್ನು ಭಾರತ ತಂಡ ಹೆಚ್ಚು ನಂಬಿಕೊಂಡಿದೆ, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಹರೈನ್ ತಂಡದೊಂದಿಗೆ 1-1ರ ಡ್ರಾ ಸಾಧಿಸಿರುವ ಆತಿಥೇಯ ಯುಎಇ ಈ ಪಂದ್ಯದಲ್ಲಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.
► ಪಂದ್ಯದ ಸಮಯ: ರಾತ್ರಿ 8 ಗಂಟೆ.