ಪ್ರಧಾನ ಸುತ್ತು ಪ್ರವೇಶದ ಹಾದಿಯಲ್ಲಿ ಪ್ರಜ್ಞೇಶ್
ಮೆಲ್ಬೋರ್ನ್, ಜ.10: ಭರ್ಜರಿ ಲಯದಲ್ಲಿರುವ ಭಾರತದ ಸಿಂಗಲ್ಸ್ ವಿಭಾಗದ ಟೆನಿಸ್ ತಾರೆ ಪ್ರಜ್ಞೇಶ್ ಗುಣೇಶ್ವರನ್ ಆಸ್ಟ್ರೇಲಿಯ ಓಪನ್ ಟೂರ್ನಿಯ ಪ್ರಧಾನ ಸುತ್ತಿಗೆ ಚೊಚ್ಚಲ ಬಾರಿಗೆ ಪ್ರವೇಶ ಪಡೆಯುವ ಹಾದಿಯಲ್ಲಿದ್ದಾರೆ. ಗುರುವಾರ ನಡೆದ ಅರ್ಹತಾ ಟೂರ್ನಿಯ ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಸ್ಪೇನ್‌ನ ಎನ್ರಿಕ್ ಲೊಪೆಝ್ ಪೆರೆಝ್ ಅವರನ್ನು 6-3, 6-3 ನೇರ ಸೆಟ್‌ಗಳಿಂದ ಮಣಿಸಿದರು. ವಿಶ್ವ ನಂ.112ನೇ ರ್ಯಾಂಕಿನ ಪ್ರಜ್ಞೇಶ್ ತಮ್ಮ ಮುಂದಿನ ಪಂದ್ಯದಲ್ಲಿ 192ನೇ ರ್ಯಾಂಕಿನ ಜಪಾನ್‌ನ ಯೋಸುಕೆ ವಾಟನಕಿ ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಈ ಪಂದ್ಯದಲ್ಲಿ ಪ್ರಜ್ಞೇಶ್ ವಿಜಯಿಯಾದರೆ ಗ್ರಾನ್‌ಸ್ಲಾಮ್ ಟೂರ್ನಿಯೊಂದರ ಪ್ರಧಾನ ಸುತ್ತಿಗೆ ಅವರ ಚೊಚ್ಚಲ ಪ್ರವೇಶವಾಗಲಿದೆ.
ಮತ್ತೊಂದೆಡೆ ಭರವಸೆಯ ಆಟಗಾರ್ತಿ ಅಂಕಿತಾ ರೈನಾ ಹಾಗೂ ರಾಮ್‌ಕುಮಾರ್ ರಾಮನಾಥನ್ ತಮ್ಮ ಪಂದ್ಯಗಳಲ್ಲಿ ಹೀನಾಯ ಸೋಲು ಕಾಣುವುದರ ಮೂಲಕ ಆಸ್ಟ್ರೇಲಿಯ ಓಪನ್ ಅರ್ಹತಾ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ವಿಶ್ವ ರ್ಯಾಂಕಿಂಗ್‌ನಲ್ಲಿ 132ನೇ ಸ್ಥಾನದಲ್ಲಿರುವ ರಾಮ್‌ಕುಮಾರ್ ರಾಮನಾಥನ್, 7-5, 5-7, 6-7 ಸೆಟ್‌ಗಳ ಅಂತರದಿಂದ ಜರ್ಮನಿಯ ರುಡಾಲ್ಫ್ ಮೊಲ್ಲೆಕೆರ್ ವಿರುದ್ಧ ವೀರೋಚಿತ ಸೋಲು ಅನುಭವಿಸಿದರು. ಮಹಿಳಾ ಸಿಂಗಲ್ಸ್ ನಲ್ಲಿ ಏಶ್ಯನ್ ಗೇಮ್ಸ್‌ನ ಕಂಚು ವಿಜೇತೆ ಅಂಕಿತಾ ರೈನಾ ಅವರು ಸ್ಪೇನ್‌ನ 29ನೇ ಶ್ರೇಯಾಂಕಿತ ಆಟಗಾರ್ತಿ ಪೌಲಾ ಬಡೊಸಾ ಗಿಬರ್ಟ್ ವಿರುದ್ಧ 6-4, 2-6, 4-6 ಸೆಟ್‌ಗಳ ಅಂತರದಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದರು.