ವೀರೋಚಿತ ಸೋಲುಂಡ ಮರ್ರೆ
ಮೆಲ್ಬೋರ್ನ್, ಜ.14: ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸುವ ಮೂಲಕ ವೃತ್ತಿಜೀವನಕ್ಕೆ ತೆರೆ ಎಳೆಯಬೇಕೆಂಬ ಬ್ರಿಟನ್ ಆಟಗಾರ ಆ್ಯಂಡಿ ಮರ್ರೆ ಬಯಕೆ ಈಡೇರಲಿಲ್ಲ. ಸೋಮವಾರ ನಡೆದ 4 ಗಂಟೆ, 9 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪುರುಷರ ಸಿಂಗಲ್ಸ್ ಸೆಣಸಾಟದಲ್ಲಿ ಸ್ಪೇನ್‌ನ ರಾಬರ್ಟೊ ಬೌಟಿಸ್ಟಾ ಅಗುಟ್ ಅವರು ಮರ್ರೆ ಅವರನ್ನು 6-4, 6-4, 6-7(5), 6-7(4), 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಮೊದಲೆರಡು ಸೆಟ್‌ಗಳ ಸೋಲಿನ ಬಳಿಕ ತಿರುಗೇಟು ನೀಡಿದ ಮಾಜಿ ವಿಶ್ವದ ನಂ.1 ಆಟಗಾರ ಮರ್ರೆ ಪಂದ್ಯವನ್ನು ಐದು ಸೆಟ್‌ಗಳ ತನಕ ವಿಸ್ತರಿಸಿದರು. ಸೋತ ಬಳಿಕ ತನ್ನ ರಾಕೆಟನ್ನು ಎತ್ತಿ ಹಿಡಿದ ಮರ್ರೆ ನೆರೆದಿದ್ದ ಪ್ರೇಕ್ಷಕರಿಗೆ ವಂದನೆ ಸಲ್ಲಿಸಿದರು. ಮರ್ರೆ ಪಂದ್ಯ ಆಡಲು ಮೈದಾನಕ್ಕೆ ಇಳಿದ ತಕ್ಷಣ ನೆರೆದಿದ್ದ ಪ್ರೇಕ್ಷಕರು ಎದ್ದುನಿಂತು ಗೌರವಿಸಿದರು. ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ಮರ್ರೆ, ಆಸ್ಟ್ರೇಲಿಯನ್ ಓಪನ್ ವೃತ್ತಿಬದುಕಿನ ಕೊನೆಯ ಪಂದ್ಯವಾಗಬಹುದು ಎಂದು ಭಾವುಕರಾಗಿ ಹೇಳಿದ್ದರು. ಸೋಮವಾರ ಪಂದ್ಯದ ಬಳಿಕ ಮಾತನಾಡಿದ ಮರ್ರೆ, ಮತ್ತೊಮ್ಮೆ ನಾನು ನಿಮ್ಮನ್ನು ನೋಡಬಹುದು.ನಾನು ಟೆನಿಸ್‌ನಲ್ಲಿ ಮುಂದುವರಿಯಲು ಎಲ್ಲ ಪ್ರಯತ್ನ ನಡೆಸುವೆ. ಒಂದು ವೇಳೆ ಮೆಲ್ಬೋರ್ನ್‌ನಲ್ಲಿ ಇದು ಕೊನೆಯ ಪಂದ್ಯವಾಗಿದ್ದರೆ ಇದೊಂದು ಅದ್ಭುತ ಅಂತ್ಯ ಎಂದು ಹೇಳಲು ಬಯಸುವೆ ಎಂದರು.