×
Ad

ವಿನಯ್ ಸಾಹಸ: ಕರ್ನಾಟಕಕ್ಕೆ 39 ರನ್ ಮುನ್ನಡೆ

Update: 2019-01-16 23:48 IST

ಬೆಂಗಳೂರು, ಜ.16: ಆಲ್‌ರೌಂಡರ್ ವಿನಯ ಕುಮಾರ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ಷರಶಃ ಮಿಂಚಿನ ಸಂಚಾರಕ್ಕೆ ಕಾರಣರಾದರು. ಹಿನ್ನಡೆಯ ಭೀತಿ ಎದುರಿಸುತ್ತಿದ್ದ ಆತಿಥೇಯರಿಗೆ ತಮ್ಮ ಭರ್ಜರಿ ಅರ್ಧಶತಕದಿಂದ (ಅಜೇಯ 83) ಪ್ರಥಮ ಇನಿಂಗ್ಸ್ ನಲ್ಲಿ 39 ರನ್‌ಗಳ ಮುನ್ನಡೆ ದೊರಕಿಸಿಕೊಟ್ಟರು. ವಿನಯ್-ರೋನಿತ್ ಮೋರೆ ಜೋಡಿ ಕೊನೆಯ ವಿಕೆಟ್ ಜೊತೆಯಾಟದಲ್ಲಿ ಗಳಿಸಿದ್ದು ಬರೋಬ್ಬರಿ 97 ರನ್. ಅಂತಿಮವಾಗಿ ಕರ್ನಾಟಕ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 263 ರನ್‌ಗೆ ಆಲೌಟ್ ಆಯಿತು. ತನ್ನ ಎರಡನೇ ಇನಿಂಗ್ಸ್ ಆರಂಭಿಸಿರುವ ರಾಜಸ್ಥಾನ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸಿದೆ.

ಇಲ್ಲಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿನ ಮುಖ್ಯಾಂಶಗಳಿವು. ಪಂದ್ಯದ ಎರಡನೇ ದಿನವಾದ ಬುಧವಾರ ವಿಕೆಟ್ ನಷ್ಟವಿಲ್ಲದೆ 12 ರನ್‌ಗಳಿಂದ ಕರ್ನಾಟಕ ಪ್ರಥಮ ಇನಿಂಗ್ಸ್ ಮುಂದುವರಿಸಿತು. ರವಿಕುಮಾರ್ ಸಮರ್ಥ್(32) ಉತ್ತಮ ಆಟವಾಡಿದರೆ ,ಡಿ.ನಿಶ್ಚಲ್(6) ವೈಫಲ್ಯ ಅನುಭವಿಸಿದರು. ಕೃಷ್ಣಮೂರ್ತಿ ಸಿದ್ಧಾರ್ಥ್ ಅರ್ಧಶತಕ (52)ಬಾರಿಸಿ ಕರ್ನಾಟಕದಅ ಇನಿಂಗ್ಸ್‌ಗೆ ಜೀವ ತುಂಬಿದರು. ನಾಯಕ ಮನೀಷ್ ಪಾಂಡೆ(7) ಹಾಗೂ ಕರುಣ್ ನಾಯರ್(4) ವಿಕೆಟ್‌ಗಳು ಶೀಘ್ರ ಪತನಗೊಂಡಾಗ ಆತಿಥೇಯರಲ್ಲಿ ಆತಂಕದ ಕಾರ್ಮೋಡ ಕವಿದಿತ್ತು.

ಶ್ರೇಯಸ್ ಗೋಪಾಲ್(25) ಹಾಗೂ ಕೆ.ಗೌತಮ್(19) ತಂಡಕ್ಕೆ ಅಲ್ಪ ಆಸರೆಯಾದರು. ಕಳೆದ ಪಂದ್ಯದಲ್ಲಿ ಕೈ ಹಿಡಿದಿದ್ದ ವಿಕೆಟ್ ಕೀಪರ್ ಶರತ್(4) ಹಾಗೂ ಅಭಿಮನ್ಯು ಮಿಥುನ್(8) ಈ ಬಾರಿ ವಿಫಲರಾದರು. 166 ರನ್ ಆಗುವಷ್ಟರಲ್ಲಿ ಪಾಂಡೆ ಬಳಗದ 9 ಆಟಗಾರರು ಪೆವಿಲಿಯನ್ ಗೂಡು ಸೇರಿದ್ದರು. ಈ ಹಂತದಲ್ಲಿ ಜೊತೆಯಾದ ವಿನಯ ಕುಮಾರ್(ಅಜೇಯ 83) ಹಾಗೂ ರೋನಿತ್(10) ಕೊನೆಯ ವಿಕೆಟ್‌ಗೆ 97 ರನ್‌ಗಳ ಜೊತೆಯಾಟ ನೀಡಿ ತಂಡದ ಮುನ್ನಡೆಗೆ ಬಲ ಒದಗಿಸಿದರು. ಅಂತಿಮ ವಿಕೆಟ್‌ಗೆ ಇವರಿಬ್ಬರೂ ಸೇರಿ ಎದುರಿಸಿದ್ದು 31 ಓವರ್‌ಗಳು. ತಂಡದ ಮೊತ್ತ 263 ರನ್‌ಗೆ ತಲುಪಿದಾಗ ರೋನಿತ್ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.

ರಾಜಸ್ಥಾನ ಪರ ರಾಹುಲ್ ಚಾಹರ್ 5, ತನ್ವೀರ್ ವುಲ್ ಹಕ್ 3 ಹಾಗೂ ದೀಪಕ್ ಚಾಹರ್ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News