ಮಲೇಶ್ಯಾ ಮಾಸ್ಟರ್ಸ್: ಸೆನಾ, ಕಶ್ಯಪ್, ಶ್ರೀಕಾಂತ್ ಶುಭಾರಂಭ
ಕೌಲಾಲಂಪುರ, ಜ.16: ಕಳೆದ ವರ್ಷಾಂತ್ಯದಲ್ಲಿ ದಾಂಪತ್ಯಬದುಕಿಗೆ ಕಾಲಿಟ್ಟಿರುವ ಸೈನಾ ನೆಹ್ವಾಲ್ ಹಾಗೂ ಪಿ.ಕಶ್ಯಪ್, ಕಿಡಂಬಿ ಶ್ರೀಕಾಂತ್ ಅವರು ಬುಧವಾರ ಇಲ್ಲಿ ಆರಂಭವಾದ ಮಲೇಶ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
ಒಂದು ಗಂಟೆ, ಐದು ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತ್ತಿನ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಸೈನಾ ಹಾಂಕಾಂಗ್‌ನ ಜಾಯ್ ಕ್ಸುಯಾನ್ ಡೆಂಗ್‌ರನ್ನು 14-21, 21-18, 21-18 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.
ಮಹಿಳಾ ಸಿಂಗಲ್ಸ್ ಇವೆಂಟ್‌ನಲ್ಲಿ ಆಡುತ್ತಿರುವ ಭಾರತದ ಏಕೈಕ ಆಟಗಾರ್ತಿ ಸೈನಾ ಮುಂದಿನ ಸುತ್ತಿನಲ್ಲಿ ಹಾಂಕಾಂಗ್‌ನ ಶ್ರೇಯಾಂಕರಹಿತ ಆಟಗಾರ್ತಿ ಪ್ಯೂಯ್ ಯಿನ್ ಯಿಪ್‌ರನ್ನು ಎದುರಿಸಲಿದ್ದಾರೆ.
ಸೈನಾರಂತೆಯೇ ಕಶ್ಯಪ್ ಕೂಡ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಯಾಸದ ಜಯ ದಾಖಲಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಕಶ್ಯಪ್ ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆರನ್ನು 19-21, 21-19, 21-10 ಅಂತರದಿಂದ ಮಣಿಸಿದ್ದಾರೆ. ಮತ್ತೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಕೆ.ಶ್ರೀಕಾಂತ್ ಕೇವಲ 30 ನಿಮಿಷಗಳಲ್ಲಿ ಎದುರಾಳಿ ಹಾಂಕಾಂಗ್‌ನ ಅಂಗುಸ್ ಕಾ ಲಾಂಗ್‌ರನ್ನು 21-17, 21-11 ಗೇಮ್‌ಗಳ ಅಂತರದಿಂದ ಸುಲಭವಾಗಿ ಸೋಲಿಸಿದರು. ಕಶ್ಯಪ್‌ಗೆ ಎರಡನೇ ಸುತ್ತಿನಲ್ಲಿ ಇಂಡೋನೇಶ್ಯಾದ ಆರನೇ ಶ್ರೇಯಾಂಕದ ಅಂಥೋನಿ ಸಿನಿಸುಕಾ ಸವಾಲು ಎದುರಿಸಬೇಕಾಗಿದೆ. ಶ್ರೀಕಾಂತ್ ಹಾಂಕಾಂಗ್‌ನ ವಿನ್ಸೆಂಟ್ ವಿಂಗ್ ಕಿ ವಾಂಗ್‌ರನ್ನು ಮುಖಾಮುಖಿಯಾಗಲಿದ್ದಾರೆ.
ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ ಹಾಂಕಾಂಗ್‌ನ ಯಾವು ಎನ್‌ಜಿ ಹಾಗೂ ಸಿನ್ ಯಿಂಗ್ ಯುಯೆನ್ ವಿರುದ್ಧ 21-16, 22-20 ಗೇಮ್‌ಗಳ ಅಂತರದಿಂದ ಪ್ರಯಾಸದ ಜಯ ಸಾಧಿಸಿ ಮೊದಲ ತಡೆ ದಾಟಿದ್ದಾರೆ. ಅಶ್ವಿನಿ-ಸಿಕ್ಕಿ ಮುಂದಿನ ಸುತ್ತಿನಲ್ಲಿ ಇಂಡೋನೇಶ್ಯಾದ ಕೆಟುಟ್ ಮಹಡೆವಿ ಹಾಗೂ ರಿಝ್ಕಿ ಅಮೆಲಿಯಾ ಪ್ರದೀಪ್ತಾರನ್ನು ಎದುರಿಸಲಿದ್ದಾರೆ.
ಭಾರತದ ಮಿಕ್ಸೆಡ್ ಡಬಲ್ಸ್ ಜೋಡಿ ಪ್ರಣಯ್ ಜೆರ್ರಿ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಅಭಿಯಾನ ಅಂತ್ಯವಾಗಿದೆ. ಈ ಜೋಡಿ ಹಾಲೆಂಡ್‌ನ ರಾಬಿನ್ ಟಬೆಲಿಂಗ್ ಹಾಗೂ ಸೆಲೆನಾ ಪಿಯೆಕ್ ವಿರುದ್ಧ 19-21, 17-21 ಅಂತರದಿಂದ ಸೋತಿದೆ.