ಟೇಬಲ್ ಟೆನಿಸ್ ತಂಡಕ್ಕೆ ಕೋಚ್ ಸಮಸ್ಯೆ
ಷಹೊಸದಿಲ್ಲಿ, ಜ.16: 2020ರ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತಾ ವರ್ಷವಾದ 2019ರಲ್ಲಿ ಭಾರತ ಟೇಬಲ್ ಟೆನಿಸ್ ತಂಡಕ್ಕೆ ಕೋಚ್ ಸಮಸ್ಯೆ ಬಹುದೊಡ್ಡ ತೊಡಕಾಗಿ ಪರಿಣಮಿಸಿದೆ. ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರರು ಸದ್ಯ ಕೋಚ್ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ.
ಏಶ್ಯನ್ ಗೇಮ್ಸ್‌ನಲ್ಲಿ ಸುಮಾರು 60 ವರ್ಷಗಳ ಬಳಿಕ ಭಾರತ ಟೇಬಲ್ ಟೆನಿಸ್ ತಂಡ ಪದಕದ ಖಾತೆ ತೆರೆದಿತ್ತು. ಈ ಟೂರ್ನಿ ನಡೆದು 5 ತಿಂಗಳುಗಳು ಕಳೆದರೂ ಮ್ಯಾಸ್ಸಿಮೊ ಕಾಸ್ಟಂಟಿನಿ(ಮಾಜಿ ಕೋಚ್) ಅವರ ಉತ್ತರಾಧಿಕಾರಿಯನ್ನು ನೇಮಿಸಲು ಭಾರತದ ಟೇಬಲ್ ಟೆನಿಸ್ ಒಕ್ಕೂಟ ಹಾಗೂ ಭಾರತ ಕ್ರೀಡಾ ಪ್ರಾಧಿಕಾರಕ್ಕೆ(ಸಾಯ್)ಸಾಧ್ಯವಾಗಿಲ್ಲ.
ಈ ಕುರಿತು ಪಿಟಿಐದೊಂದಿಗೆ ಮಾತನಾಡಿರುವ ಟೇಬಲ್ ಟೆನಿಸ್ ಒಕ್ಕೂಟದ ಅಧಿಕಾರಿಯೊಬ್ಬರು, ತಂಡಕ್ಕೆ ವಿದೇಶಿ ಕೋಚ್ ನೇಮಕ ಕುರಿತಂತೆ ಯಾವುದೇ ಬೆಳವಣಿಗೆಗಳು ನಡೆಯುತ್ತಿಲ್ಲ. ನಾವು ಕೆಲವು ಹೆಸರುಗಳನ್ನು ಸಾಯ್ ಹಾಗೂ ಕ್ರೀಡಾ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದೇವೆ. ಆದರೆ ಸರಕಾರ ಸದ್ಯ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ನಿರತವಾಗಿದೆ’’ ಎಂದಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಸಾಯ್ ಅಧಿಕಾರಿಯೋರ್ವರು ‘‘ಸೂಕ್ತ ಕೋಚ್ ಹುಡುಕುವ ಪ್ರಕ್ರಿಯೆ ಜಾರಿಯಲ್ಲಿದೆ. ಕ್ರೀಡಾ ಸಚಿವಾಲಯ ಅಂತಿಮ ಅಂಗೀಕಾರ ಮುದ್ರೆ ಒತ್ತಲಿದೆ’’ಎಂದರು.