ರೊನಾಲ್ಡೊ ಮಿಂಚು: ಜುವೆಂಟಸ್‌ಗೆ ಇಟಾಲಿಯನ್ ಸೂಪರ್ ಕಪ್

Update: 2019-01-17 17:53 GMT

ಜೆಡ್ಡಾ, ಜ.17: ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಜುವೆಂಟಸ್ ಎಸಿ ಮಿಲಾನ್ ತಂಡವನ್ನು ಸೋಲಿಸಿ ಇಟಾಲಿಯನ್ ಸೂಪರ್ ಕಪ್‌ನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಈ ಋತುವಿನ ಮೊದಲ ಪ್ರಶಸ್ತಿಗೆ ಮುತ್ತಿಕ್ಕಿದೆ.

ಸೌದಿ ಅರೇಬಿಯದಲ್ಲಿ ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ರೊನಾಲ್ಡೊ 61ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಜುವೆಂಟಸ್ ತಂಡದ ಗೆಲುವಿನ ರೂವಾರಿಯಾದರು. ಪೋರ್ಚುಗಲ್ ರಾಷ್ಟ್ರೀಯ ತಂಡದ ಆಟಗಾರ ರೊನಾಲ್ಡೊ ರಿಯಲ್ ಮ್ಯಾಡ್ರಿಡ್ ತಂಡದಿಂದ ಕಳೆದ ವರ್ಷ ಇಟಲಿಯ ಜುವೆಂಟಸ್ ತಂಡಕ್ಕೆ ಜಿಗಿದಿದ್ದರು.

ಪಂದ್ಯದ 73ನೇ ನಿಮಿಷದಲ್ಲಿ ಜುವೆಂಟಸ್ ತಂಡದ ಆಟಗಾರ ಎಮ್ರೆ ಕ್ಯಾನ್‌ರನ್ನು ಅನುಚಿತವಾಗಿ ಸ್ಪರ್ಶಿಸಿದ ಕಾರಣ ಮಿಲಾನ್ ತಂಡದ ಮಿಡ್‌ಫೀಲ್ಡರ್ ಫ್ರಾಂಕ್ ಕೆಸ್ಸಿ ರೆಡ್ ಕಾರ್ಡ್ ಪಡೆದರು. ಆದ್ದರಿಂದ ಮಿಲಾನ್ 10 ಆಟಗಾರರೊಂದಿಗೆ ಆಟವಾಡಿತು. ಪಂದ್ಯದ ನಂತರ ಮಾತನಾಡಿದ ರೊನಾಲ್ಡೊ, ‘‘ಜುವೆಂಟಸ್ ತಂಡದೊಂದಿಗೆ ಸೇರಿ ಮೊದಲ ಬಾರಿ ಟ್ರೋಫಿ ಜಯಿಸಿದ್ದಕ್ಕೆ ಖುಷಿಯಾಗುತ್ತಿದೆ’’ ಎಂದರು. 5 ಬಾರಿ ಚಾಂಪಿಯನ್ಸ್ ಲೀಗ್ , ಇಂಗ್ಲೆಂಡ್ ಹಾಗೂ ಸ್ಪೇನ್ ಲೀಗ್‌ಗಳು ಹಾಗೂ ಪೋರ್ಚುಗಲ್ ತಂಡದೊಂದಿಗೆ ಒಂದು ಬಾರಿ ಯುರೋಪಿಯನ್ ಲೀಗ್ ಸೇರಿದಂತೆ ಒಟ್ಟು 28 ಟ್ರೋಫಿಗಳನ್ನು ರೊನಾಲ್ಡೊ ಜಯಿಸಿದಂತಾಗಿದೆ.

ಜುವೆಂಟಸ್ ತಂಡ ಇಟಾಲಿಯನ್ ಸೂಪರ್ ಕಪ್‌ನ್ನು ದಾಖಲೆಯ 8 ಬಾರಿ ಗೆದ್ದಿದ್ದರೆ, ಎಸಿ ಮಿಲಾನ್ ತಂಡ 7 ಬಾರಿ ಜಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News