ಮೂರನೇ ಸುತ್ತಿಗೆ ವಿಲಿಯಮ್ಸ್ ಸಹೋದರಿಯರು ತೇರ್ಗಡೆ

Update: 2019-01-17 17:56 GMT

ಮೆಲ್ಬೋರ್ನ್, ಜ.17: ಆಸ್ಟ್ರೇಲಿಯನ್ ಓಪನ್‌ನಲ್ಲಿ ವಿಲಿಯಮ್ಸ್ ಸಹೋದರಿಯರಾದ ಸೆರೆನಾ ಹಾಗೂ ವೀನಸ್ ಮೂರನೇ ಸುತ್ತಿಗೆ ತೇರ್ಗಡೆಯಾದರು.

ಇಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ದಾಖಲೆ 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಬೇಟೆಯಲ್ಲಿರುವ ಸೆರೆನಾ ಕೆನಡಾದ ಎವ್‌ಜಿನಿ ಬೌಚಾರ್ಡ್‌ರನ್ನು 70 ನಿಮಿಷಗಳ ಹೋರಾಟದಲ್ಲಿ 6-2, 6-2 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. ಮತ್ತೊಂದು ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ ಆಸ್ಟ್ರೇಲಿಯದ ಟೆನಿಸ್ ದಂತಕತೆ ಮಾರ್ಗರೆಟ್ ಕೋರ್ಟ್ ದಾಖಲೆಯನ್ನು ಸರಿಗಟ್ಟುವ ನಿರೀಕ್ಷೆಯಲ್ಲಿರುವ ಸೆರೆನಾ ಮುಂದಿನ ಸುತ್ತಿನಲ್ಲಿ ಉಕ್ರೇನ್‌ನ ಯುವ ಆಟಗಾರ್ತಿ ಡಯಾನಾ ಯಸ್ಟ್ರೆಂಸ್ಕಾರನ್ನು ಎದುರಿಸಲಿದ್ದಾರೆ.

37ರ ಹರೆಯದ ಸೆರೆನಾ 2 ವರ್ಷಗಳ ಹಿಂದೆ ಆಸ್ಟ್ರೇಲಿಯದಲ್ಲಿ 23ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಆಗ ಅವರು ಎರಡು ತಿಂಗಳ ಗರ್ಭಿಣಿಯಾಗಿದ್ದರು. ಈ ಬಾರಿ 16ನೇ ಶ್ರೇಯಾಂಕ ಪಡೆದಿರುವ ಸೆರೆನಾ 8ನೇ ಬಾರಿ ಪ್ರಶಸ್ತಿ ಜಯಿಸುವ ಫೇವರಿಟ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಇದೇ ವೇಳೆ, ಮತ್ತೊಂದು ಮಹಿಳೆಯರ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ಏಳು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ವೀನಸ್ ವಿಲಿಯಮ್ಸ್ ಫ್ರಾನ್ಸ್‌ನ ಅಲಿಝ್ ಕಾರ್ನೆಟ್‌ರನ್ನು 6-3, 4-6, 6-0 ಅಂತರದಿಂದ ಮಣಿಸಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟರು.

ಶ್ರೇಯಾಂಕರಹಿತ 38ರ ಹರೆಯದ ವೀನಸ್ ಮುಂದಿನ ಸುತ್ತಿನಲ್ಲಿ ಅಗ್ರ ಶ್ರೇಯಾಂಕಿತೆ ಸಿಮೊನಾ ಹಾಲೆಪ್‌ರನ್ನು ಎದುರಿಸಲಿದ್ದಾರೆ. ಸೆರೆನಾರ ಅಕ್ಕ ವೀನಸ್ 1998ರಲ್ಲಿ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಿದ್ದರು. ಈ ಹಿಂದೆ ಮೆಲ್ಬೋರ್ನ್ ನಲ್ಲಿ 2 ಬಾರಿ ಫೈನಲ್‌ಗೆ ತಲುಪಿರುವ ವೀನಸ್ ಈ ಬಾರಿ ಒಂದು ವೇಳೆ ಕ್ವಾರ್ಟರ್ ಫೈನಲ್‌ಗೆ ತಲುಪಿದರೆ ಸೆರೆನಾರನ್ನು ಎದುರಿಸಲಿದ್ದಾರೆ. ವೀನಸ್ ಮುಂದಿನ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್‌ರನ್ನು ಎದುರಿಸಲಿದ್ದಾರೆ.

ರೊಮಾನಿಯದ ಅಗ್ರ ಶ್ರೇಯಾಂಕದ ಆಟಗಾರ್ತಿ ಹಾಲೆಪ್ ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಶ್ರೇಯಾಂಕರಹಿತ ಅಮೆರಿಕದ ಸೋಫಿಯಾ ಕೆನಿನ್‌ರನ್ನು 6-3, 6-7(5/7), 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಎರಡೂವರೆ ಗಂಟೆಗಳ ಹೋರಾಟದಲ್ಲಿ ಗೆಲುವು ದಕ್ಕಿಸಿಕೊಂಡಿರುವ ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಹಾಲೆಪ್‌ಗೆ ಮುಂದಿನ ಸುತ್ತಿನಲ್ಲಿ ಮತ್ತಷ್ಟು ಒತ್ತಡ ಎದುರಿಸಬೇಕಾಗಿದ್ದು, ವೀನಸ್ ಸವಾಲು ಮೆಟ್ಟಿನಿಲ್ಲಬೇಕಾಗಿದೆ.

ಗೆಲುವಿನ ನಗೆ ಬೀರಿದ ಪ್ಲಿಸ್ಕೋವಾ: ನಿಧಾನಗತಿಯ ಆರಂಭದಿಂದ ಚೇತರಿಸಿಕೊಂಡ ಏಳನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೋವಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ 3ನೇ ಸುತ್ತಿಗೆ ತಲುಪಿದ್ದಾರೆ.

26ರ ಹರೆಯದ ಝೆಕ್ ಆಟಗಾರ್ತಿ ಪ್ಲಿಸ್ಕೋವಾ ಶ್ರೇಯಾಂಕರಹಿತ ಅಮೆರಿಕ ಆಟಗಾರ್ತಿ ಮ್ಯಾಡಿಸನ್ ಬ್ರೆಂಗ್ಲೆ ಅವರನ್ನು 4-6, 6-1, 6-0 ಸೆಟ್‌ಗಳ ಅಂತರದಿಂದ ಸೋಲಿಸಿದರು. ಕಳೆದೆರಡು ಬಾರಿ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಆಡಿದ್ದ ಪ್ಲಿಸ್ಕೋವಾ ಕ್ವಾರ್ಟರ್ ಫೈನಲ್ ತಲುಪಿದ್ದರು. ಪ್ಲಿಸ್ಕೋವಾ ಮುಂದಿನ ಸುತ್ತಿನಲ್ಲಿ 27ನೇ ಶ್ರೇಯಾಂಕದ ಇಟಲಿಯ ಕಾಮಿಲಾ ಗಿಯೊರ್ಗಿ ಅವರನ್ನು ಎದುರಿಸಲಿದ್ದಾರೆ.

ಒಸಾಕಾ 3ನೇ ಸುತ್ತಿಗೆ ಲಗ್ಗೆ

ಜಪಾನ್‌ನ 4ನೇ ಶ್ರೇಯಾಂಕದ ನಯೊಮಿ ಒಸಾಕಾ ಸ್ಲೋವಾನಿಯದ ತಮಾರಾ ಝಿಡಾನ್‌ಸೆಕ್‌ರನ್ನು 6-2, 6-4 ನೇರ ಸೆಟ್‌ಗಳಿಂದ ಸೋಲಿಸುವುದರೊಂದಿಗೆ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಯುಎಸ್ ಓಪನ್ ಚಾಂಪಿಯನ್ ಒಸಾಕಾ ಎರಡನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯತ್ತ ಗುರಿ ಇಟ್ಟಿದ್ದಾರೆ. 21ರಹರೆಯದ ಒಸಾಕಾ ತೈವಾನ್‌ನ ಸಿ-ಸು-ವೀ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News