ಸಿಮೊನ್‌ಗೆ ಸೋಲುಣಿಸಿದ ಬೋಲ್ಟ್

Update: 2019-01-17 18:03 GMT

ಮೆಲ್ಬೋರ್ನ್, ಜ.17: ವೈಲ್ಡ್‌ಕಾರ್ಡ್ ಆಟಗಾರ ಅಲೆಕ್ಸ್ ಬೋಲ್ಟ್ ಗುರುವಾರ ನಡೆದ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್ ನ 2ನೇ ಸುತ್ತಿನ ಪಂದ್ಯದಲ್ಲಿ 29ನೇ ಶ್ರೇಯಾಂಕದ ಗಿಲ್ಲೆಸ್ ಸಿಮೊನ್‌ರನ್ನು ಸೋಲಿಸಿ ಶಾಕ್ ನೀಡಿದರು. ಆಸ್ಟ್ರೇಲಿಯ ಆಟಗಾರ ಬೋಲ್ಟ್ 4 ಗಂಟೆ, 4 ನಿಮಿಷಗಳ ಕಾಲ ಮ್ಯಾರಥಾನ್ ಪಂದ್ಯದಲ್ಲಿ ಫ್ರಾನ್ಸ್‌ನ ಸಿಮೊನ್‌ರನ್ನು 2-6, 6-4, 4-6, 7-6(10/8), 6-4 ಸೆಟ್‌ಗಳಿಂದ ಮಣಿಸಿದರು. ಈ ಮೂಲಕ ನೆರೆದಿದ್ದ ತವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯದ ಇನ್ನೋರ್ವ ಯುವ ಆಟಗಾರ ಅಲೆಕ್ಸಿ ಪಾಪ್ರಿನ್ ಅಂತಿಮ-32ರ ಸುತ್ತಿಗೆ ತಲುಪಿದರು. ಎದುರಾಳಿ ಆಸ್ಟ್ರೀಯ ಆಟಗಾರ ಡೊಮಿನಿಕ್ ಥೀಮ್ 2 ಸೆಟ್‌ಗಳ ಹಿನ್ನಡೆಯಲ್ಲಿದ್ದಾಗ ಗಾಯಗೊಂಡು ಪಂದ್ಯದಿಂದ ನಿವೃತ್ತಿಯಾದ ಹಿನ್ನೆಲೆಯಲ್ಲಿ ಅಲೆಕ್ಸಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. 26ರಹರೆಯದ ಬೋಲ್ಟ್ ಈ ತನಕ ಅಗ್ರ-100 ಆಟಗಾರರನ್ನು ಸೋಲಿಸಿಲ್ಲ. ಇಂದು ಆ ಸಾಧನೆ ಮಾಡಿದ 159ನೇ ರ್ಯಾಂಕಿನ ಬೋಲ್ಟ್ ಟೆನಿಸ್ ಅಂಗಣದಲ್ಲಿ ಕುಣಿದುಕುಪ್ಪಳಿಸಿದರು.

34ರ ಹರೆಯದ ಸಿಮೊನಾ ತೀವ್ರ ಮುಖಭಂಗ ಅನುಭವಿಸಿದರು. ಅವರು ಈ ತನಕ ಕೆಳ ರ್ಯಾಂಕಿನ ಆಟಗಾರರ ವಿರುದ್ಧ ಗ್ರಾನ್‌ಸ್ಲಾಮ್ ಪಂದ್ಯದಲ್ಲಿ ಸೋತಿಲ್ಲ. ಬೋಲ್ಟ್ ಮುಂದಿನ ಸುತ್ತಿನಲ್ಲಿ ಅಲೆಕ್ಸಾಂಡರ್ ಝ್ವೆರೆವ್ ಅವರನ್ನು ಎದುರಿಸಲಿದ್ದಾರೆ. 19ರ ಹರೆಯದ ಅಲೆಕ್ಸಿ ಮುಂದಿನ ಸುತ್ತಿನಲ್ಲಿ ಫ್ರಾನ್ಸ್ ನ ಲುಕಾಸ್ ಪೌಲಿ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News