ಕುತೂಹಲ ಘಟ್ಟದಲ್ಲಿ ಕರ್ನಾಟಕ-ರಾಜಸ್ಥಾನ ರಣಜಿ ಕ್ವಾರ್ಟರ್‌ಫೈನಲ್

Update: 2019-01-17 18:09 GMT

ಬೆಂಗಳೂರು, ಜ.17: ಕೃಷ್ಣಪ್ಪ ಗೌತಮ್ ಬೌಲಿಂಗ್ ದಾಳಿಗೆ ನಲುಗಿದ ರಾಜಸ್ಥಾನ ತಂಡ ರಣಜಿ ಟ್ರೋಫಿಯ ಕ್ವಾರ್ಟರ್‌ಫೈನಲ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ 222 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಪಾಂಡೆ ಬಳಗಕ್ಕೆ 184 ರನ್‌ಗಳ ಗೆಲುವಿನ ಗುರಿ ವಿಧಿಸಿದೆ. ಗುರಿ ಬೆನ್ನಟ್ಟಿರುವ ಕರ್ನಾಟಕ ಮೂರು ವಿಕೆಟ್ ಕಳೆದುಕೊಂಡು 45 ರನ್ ಗಳಿಸಿದ್ದು, ಸೆಮಿಫೈನಲ್ ತಲುಪಲು ಇನ್ನೂ 139 ರನ್‌ಗಳ ಅಗತ್ಯವಿದೆ.

ಇಲ್ಲಿಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಗುರುವಾರ ವಿಕೆಟ್ ನಷ್ಟವಿಲ್ಲದೆ 11 ರನ್‌ಗಳಿಂದ ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ ತಂಡದ ಎಲ್ಲ ಆಟಗಾರರು ಸಂಘಟಿತ ಪ್ರದರ್ಶನ ನೀಡಿ ಗಮನ ಸೆಳೆದರು. ಎ.ಗೌತಮ್(24), ಚೇತನ್ ಬಿಸ್ತ್(33), ನಾಯಕ ಲಮ್ರ್‌ರ್(42), ರಾಬಿನ್ ಬಿಸ್ತ್(44), ಸಲ್ಮಾನ್ ಖಾನ್(25) ಹಾಗೂ ರಾಹುಲ್ ಚಾಹರ್(22) ಬ್ಯಾಟಿಂಗ್‌ನಲ್ಲಿ ಉತ್ತಮ ಕಾಣಿಕೆ ನೀಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅಂತಿಮವಾಗಿ ಪ್ರವಾಸಿಗರು 222 ರನ್ ಗಳಿಸಿ ಎಲ್ಲ ವಿಕೆಟ್ ಒಪ್ಪಿಸಿದರು. ಕರ್ನಾಟಕದ ಪರ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅತ್ಯಧಿಕ 4 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ 3 ವಿಕೆಟ್ ಕಬಳಿಸಿದರು. ಅಭಿಮನ್ಯು ಮಿಥುನ್ 2 ಹಾಗೂ ರೋನಿತ್ ಮೋರೆ 1 ವಿಕೆಟ್‌ಗೆ ತೃಪ್ತಿಪಟ್ಟರು. ಪ್ರಥಮ ಇನಿಂಗ್ಸ್‌ನಲ್ಲಿ ವಿನಯಕುಮಾರ್ ಅವರ ಅಜೇಯ 83 ರನ್‌ಗಳ ನೆರವಿನಿಂದ 39 ರನ್‌ಗಳ ಮುನ್ನಡೆ ಪಡೆದಿದ್ದ ಆತಿಥೇಯರಿಗೆ ದ್ವಿತೀಯ ಇನಿಂಗ್ಸ್ ನಲ್ಲಿ ಗೆಲುವಿಗೆ ಒಟ್ಟು 184 ರನ್‌ಗಳ ಗುರಿ ದೊರಕಿದೆ. ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ಸದ್ಯ ಮೂರು ವಿಕೆಟ್ ಕಳೆದುಕೊಂಡಿದೆ. ಡಿ.ನಿಶ್ಚಲ್(1), ಕೃಷ್ಣಮೂರ್ತಿ ಸಿದ್ಧಾರ್ಥ್(5) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೆ, ರವಿಕುಮಾರ್ ಸಮರ್ಥ್(16) ಅಲ್ಪ ಪ್ರತಿರೋಧ ತೋರಿದರು. ಉತ್ತಮ ಆಟವಾಡುತ್ತಿರುವ ಕರುಣ್ ನಾಯರ್(18) ಹಾಗೂ ನೈಟ್ ವಾಚ್‌ಮನ್ ರೋನಿತ್ ಮೋರೆ(5) ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಪಂದ್ಯದ ನಾಲ್ಕನೇ ಹಾಗೂ ಅಂತಿಮ ದಿನವಾದ ಶುಕ್ರವಾರದ ಆಟ ಕುತೂಹಲ ಕೆರಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News