ಕ್ವಾರ್ಟರ್‌ಫೈನಲ್‌ಗೆ ಸೈನಾ, ಕಿಡಂಬಿ ಶ್ರೀಕಾಂತ್

Update: 2019-01-17 18:14 GMT

ಕೌಲಾಲಂಪುರ, ಜ.17: ಹಾಂಕಾಂಗ್‌ನ ಪ್ಯು ಯಿನ್ ಯಿಪ್ ಅವರನ್ನು ನೇರ ಗೇಮ್‌ಗಳಿಂದ ಸದೆಬಡಿದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಲೇಶ್ಯಾ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಟೂರ್ನಿಯಲ್ಲಿ 7ನೇ ಶ್ರೇಯಾಂಕದ ಸೈನಾ ಗುರುವಾರ 39 ನಿಮಿಷಗಳ ಕಾಲ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಯಿಪ್ ಅವರನ್ನು 21-14, 21-16 ಗೇಮ್‌ಗಳಿಂದ ಸದೆಬಡಿದರು.

ವರ್ಷದ ಪ್ರಥಮ ಸೂಪರ್ 500 ಟೂರ್ನಿಯಾದ ಮಲೇಶ್ಯಾ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೈನಾ 2ನೇ ಶ್ರೇಯಾಂಕದ ಆಟಗಾರ್ತಿ ಜಪಾನ್‌ನ ನೊರೊಮಿ ಒಕುಹರಾ ಅವರನ್ನು ಎದುರಿಸಲಿದ್ದಾರೆ.

ಕಳೆದ ವರ್ಷದ ಡೆನ್ಮಾರ್ಕ್ ಹಾಗೂ ಫ್ರೆಂಚ್ ಓಪನ್‌ಗಳು ಸೇರಿದಂತೆ ಸತತ ಎರಡು ಟೂರ್ನಿಗಳಲ್ಲಿ ಒಕುಹರಾ ಅವರನ್ನು ಮಣಿಸಿರುವ ಸೈನಾ, ಒಟ್ಟು 8-4 ಹೆಡ್-ಟು-ಹೆಡ್ ದಾಖಲೆಯನ್ನು ಒಕುಹರಾ ವಿರುದ್ಧ ಹೊಂದಿದ್ದಾರೆ. ಶ್ರೀಕಾಂತ್ ಕ್ವಾರ್ಟರ್‌ಗೆ: ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್, ಹಾಂಕಾಂಗ್‌ನ ವಿನ್ಸೆಂಟ್ ವಿಂಗ್ ಕಿ ವೊಂಗ್ ಅವರನ್ನು 23-21, 8-21, 21-18 ಗೇಮ್‌ಗಳ ಅಂತರದಿಂದ ಮಣಿಸಿ ಕ್ವಾರ್ಟರ್‌ಫೈನಲ್‌ಗೆ ದಾಂಗುಡಿಯಿಟ್ಟರು. ಮೊದಲ ಗೇಮ್‌ನ್ನು ಪ್ರಯಾಸದಿಂದ ಗೆದ್ದುಕೊಂಡಿದ್ದ ಶ್ರೀಕಾಂತ್ ಎರಡನೇ ಗೇಮ್‌ನಲ್ಲಿ 8-21ರಿಂದ ಎದುರಾಳಿಗೆ ಸೋತರು. ಮತ್ತೆ ಮೂರನೇ ಗೇಮ್‌ನಲ್ಲಿ ತಿರುಗೇಟು ನೀಡಿ 21-18ರಿಂದ ಗೆದ್ದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News