ಜೊಕೊವಿಕ್, ನಿಶಿಕೊರಿ ಪ್ರಿ-ಕ್ವಾರ್ಟರ್ ಫೈನಲ್‌ಗೆ

Update: 2019-01-19 18:00 GMT

ಮೆಲ್ಬೋರ್ನ್, ಜ.19: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶನಿವಾರ ನೊವಾಕ್ ಜೊಕೊವಿಕ್, ಕೀ ನಿಶಿಕೊರಿ, ಸೆರೆನಾ ವಿಲಿಯಮ್ಸ್, ಸಿಮೊನಾ ಹಾಲೆಪ್ ಅಂತಿಮ-16ರ ಸುತ್ತಿಗೆ ತೇರ್ಗಡೆಯಾಗಿರುವ ಪ್ರಮುಖ ಟೆನಿಸ್ ತಾರೆಯರಾಗಿದ್ದಾರೆ.

ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್ ಡೆನ್ಮಾರ್ಕ್‌ನ ಡೆನಿಸ್ ಶಪೊವಲೊವ್‌ರನ್ನು 6-3, 6-4, 4-6, 6-0 ಸೆಟ್‌ಗಳ ಅಂತರದಿಂದ ಮಣಿಸುವುದರೊಂದಿಗೆ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ಮೂರನೇ ಸೆಟನ್ನು ಕೈಚೆಲ್ಲಿದರು. ಈ ವರ್ಷದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಬಾರಿ ಒಂದು ಸೆಟ್‌ನಲ್ಲಿ ಸೋಲಲು ಫ್ಲ್ಲಡ್‌ಲೈಟ್ ಕಾರಣ ಎಂದು ಜೊಕೊವಿಕ್ ಕಿಡಿಕಾರಿದರು. ದಾಖಲೆಯ 7ನೇ ಆಸ್ಟ್ರೇಲಿಯ ಓಪನ್ ಪ್ರಶಸ್ತಿಯ ಬೇಟೆಯಲ್ಲಿರುವ ಸರ್ಬಿಯ ಆಟಗಾರ ಜೊಕೊವಿಕ್ 25ನೇ ಶ್ರೇಯಾಂಕದ ಡೆನಿಸ್ ವಿರುದ್ಧ ಮೂರನೇ ಸೆಟ್‌ನಲ್ಲಿ 3-0 ಮುನ್ನಡೆಯಲ್ಲಿದ್ದಾಗ ಹಾಡಹಗಲೇ ರಾಡ್ ರೊವೆರ್ ಅರೆನಾದಲ್ಲಿನ ಎಲ್ಲ ಫ್ಲಡ್‌ಲೈಟ್‌ಗಳು ಒಮ್ಮೆಲೇ ಬೆಳಗಿದವು. ಇದರಿಂದ ಜೊಕೊವಿಕ್ ತನ್ನ ಏಕಾಗ್ರತೆಯನ್ನು ಸಂಪೂರ್ಣ ಕಳೆದುಕೊಂಡರು. ಮುಂದಿನ 7 ಪಂದ್ಯಗಳಲ್ಲಿ 6ರಲ್ಲಿ ಸೋತರು. ಸಂಜೆ 5 ಗಂಟೆಗೆ ಉತ್ತಮ ಬೆಳಕಿರುವಾಗ ಲೈಟ್ ಆನ್ ಮಾಡುವ ಅಗತ್ಯವಿರಲಿಲ್ಲ ಎಂದು 17 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ಹೇಳಿದ್ದಾರೆ.ಜೊಕೊವಿಕ್ ಮುಂದಿನ ಸುತ್ತಿನಲ್ಲಿ ರಶ್ಯದ 22ರ ಹರೆಯದ ಡ್ಯಾನಿಲ್ ಮೆಡ್ವೆಡೆವ್‌ರನ್ನು ಎದುರಿಸಲಿದ್ದಾರೆ. ನಿಶಿಕೊರಿ ನಾಲ್ಕನೇ ಸುತ್ತಿಗೆ:

ಜಪಾನ್ ಆಟಗಾರ ಕಿ ನಿಶಿಕೊರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ನಾಲ್ಕನೇ ಸುತ್ತು ತಲುಪಿದ್ದಾರೆ. ಶನಿವಾರ 2 ಗಂಟೆ, 6 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ 8ನೇ ಶ್ರೇಯಾಂಕದ ನಿಶಿಕೊರಿ ಪೋರ್ಚುಗಲ್‌ನ ಜೊಯೊ ಸೌಸಾರನ್ನು 7-6(8/6), 6-1, 6-2 ಸೆಟ್‌ಗಳ ಅಂತರದಿಂದ ಮಣಿಸಿದರು. 29ರ ಹರೆಯದ ನಿಶಿಕೊರಿ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಆಡಿರುವ ಎಲ್ಲ ಮೂರು ಪಂದ್ಯಗಳನ್ನ್ನು ಜಯಿಸಿ ಪ್ರಸಕ್ತ ಟೂರ್ನಿಯಲ್ಲಿ ಏಳನೇ ಬಾರಿ ಅಂತಿಮ-16ರ ಸುತ್ತು ತಲುಪಿದ್ದಾರೆ. ನಿಶಿಕೊರಿಗೆ ಇದು 9ನೇ ಆಸ್ಟ್ರೇಲಿಯನ್ ಓಪನ್ ಟೂರ್ನಿಯಾಗಿದೆ.

ಪುರುಷರ ಸಿಂಗಲ್ಸ್ ವಿಭಾಗದ 3ನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಮಾಜಿ ನಂ.3ನೇ ಆಟಗಾರ ಮಿಲೊಸ್ ರಾವೊನಿಕ್ ಫ್ರಾನ್ಸ್ ನ ಪೀರ್ರ್‌ -ಹ್ಯೂಗೆಸ್‌ರನ್ನು 6-4, 6-4, 7-6(8/6)ಸೆಟ್‌ಗಳಿಂದ ಸೋಲಿಸಿದ್ದಾರೆ. ಅಂತಿಮ-16ರ ಸುತ್ತಿನಲ್ಲಿ ಅಲೆಕ್ಸಾಂಡರ್ ಝ್ವೆರೆವ್‌ರನ್ನು ಎದುರಿಸಲಿದ್ದಾರೆ.

2016ರಲ್ಲಿ ಮೆಲ್ಬೋರ್ನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ರಾವೊನಿಕ್ ಕೇವಲ 121 ನಿಮಿಷಗಳ ಹೋರಾಟದಲ್ಲಿ ಅಂತಿಮ-32ರ ಪಂದ್ಯವನ್ನು ಜಯಿಸಿದರು.

► ಝ್ವೆರೆವ್ 4ನೇ ಸುತ್ತಿಗೆ

ಮೆಲ್ಬೋರ್ನ್, ಜ.19: ಚೊಚ್ಚಲ ಗ್ರಾನ್‌ಸ್ಲಾಮ್ ಗೆಲುವಿನ ಹಸಿವಿನಲ್ಲಿರುವ ಜರ್ಮನಿಯ ಯುವ ಪ್ರತಿಭೆ ಅಲೆಕ್ಸಾಂಡರ್ ಝ್ವೆರೆವ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಶನಿವಾರ ಮೂರನೇ ಸುತ್ತಿನ ಪಂದ್ಯದಲ್ಲಿ ಅವರು, ಆಸ್ಟ್ರೇಲಿಯದ ವೈಲ್ಡ್ ಕಾರ್ಡ್ ಆಟಗಾರ ಅಲೆಕ್ಸ್ ಬೋಲ್ಟ್ ಎದುರು 6-3, 6-3, 6-2 ಸೆಟ್‌ಗಳಿಂದ ಜಯದ ನಗೆ ಬೀರಿದರು. 112 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21 ವರ್ಷದ, ನಾಲ್ಕನೇ ಶ್ರೇಯಾಂಕದ ಝ್ವೆರೆವ್, ಆಸ್ಟ್ರೇಲಿಯನ್ ಓಪನ್‌ನ 16ರ ಘಟ್ಟವನ್ನು ಮೊದಲ ಬಾರಿ ಪ್ರವೇಶಿಸಿದ ಸಾಧನೆ ಮಾಡಿದರು. ಜರ್ಮನಿ ಆಟಗಾರ ಗಂಟೆಗೆ ಸುಮಾರು 220 ಕಿ.ಮೀ. ವೇಗದಲ್ಲಿ ಸರ್ವ್ ಮಾಡುವ ರೀತಿ ನಿಬ್ಬೆರಗುಗೊಳಿಸುವಂತಹದ್ದು. ಜಿಮ್‌ನಲ್ಲಿ ಕಠಿಣ ಪರಿಶ್ರಮ ಪಡುತ್ತಿರುವುದಾಗಿ ಝ್ವೆರೆವ್ ಹೇಳುತ್ತಾರೆ.

ಈ ಹಿಂದೆ ಸತತ ಎರಡು ದಿನಗಳಲ್ಲಿ ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್ ಹಾಗೂ ನೊವಾಕ್ ಜೊಕೊವಿಕ್‌ರಿಗೆ ಮಣ್ಣು ಮುಕ್ಕಿಸಿ ಎಟಿಪಿ ಟೂರ್ ಪ್ರಶಸ್ತಿ ಜಯಿಸಿದ್ದ ಝ್ವೆರೆವ್, 155ನೇ ಶ್ರೇಯಾಂಕದ ಆಸ್ಟ್ರೇಲಿಯ ಆಟಗಾರ ಬೋಲ್ಟ್‌ಗೆ ತನ್ನನ್ನು ಸೋಲಿಸುವ ಯಾವುದೇ ಅವಕಾಶ ನೀಡಲಿಲ್ಲ.

ತಮ್ಮ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಮವಾರ ಝ್ವೆರೆವ್, ಮಾಜಿ ವಿಶ್ವ ನಂ.3 ಆಟಗಾರ ಕೆನಡಾದ ಮಿಲೊಸ್ ರಾವೊನಿಕ್ ಅವರನ್ನು ಎದುರಿಸಲಿದ್ದಾರೆ.

►  ಸೆರೆನಾ, ಹಾಲೆಪ್, ಒಸಾಕಾ ಅಂತಿಮ-16ಕ್ಕೆ ಪ್ರವೇಶ

 
 

ಮೆಲ್ಬೋರ್ನ್, ಜ.19: ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್, ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್ ಹಾಗೂ ಜಪಾನ್ ಆಟಗಾರ್ತಿ ನಯೊಮಿ ಒಸಾಕಾ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಂತಿಮ-16ರ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಸೆರೆನಾ ಮೂರನೇ ಸುತ್ತಿನ ಪಂದ್ಯದಲ್ಲಿ ಉಕ್ರೇನ್‌ನ ಯುವ ಆಟಗಾರ್ತಿ ಡಯಾನಾ ಯಸ್ಟ್ರೆಂಸ್ಕಾರನ್ನು 6-2, 6-1 ನೇರ ಸೆಟ್‌ಗಳಿಂದ ಸೋಲಿಸಿದರು. 37ರ ಹರೆಯದ ಸೆರೆನಾ ಮೊದಲ ಮಗುವಿಗೆ ಜನ್ಮ ನೀಡಿದ ಬಳಿಕ ಮೊದಲ ಗ್ರಾನ್‌ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಸೆರೆನಾ ಎರಡು ವರ್ಷಗಳ ಹಿಂದೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡು ತಿಂಗಳ ಗರ್ಭಿಣಿಯಾಗಿದ್ದಾಗ 23ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಈ ಬಾರಿ 8ನೇ ಆಸ್ಟ್ರೇಲಿಯನ್ ಓಪನ್ ಜಯಿಸಬಲ್ಲ ಫೇವರಿಟ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಸೆರೆನಾ ಮುಂದಿನ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್ ಸವಾಲು ಎದುರಿಸಲಿದ್ದಾರೆ.

ರೊಮಾನಿಯಾದ ಅಗ್ರ ಶ್ರೇಯಾಂಕದ ಆಟಗಾರ್ತಿ ಹಾಲೆಪ್ ಶನಿವಾರ 1 ಗಂಟೆ, 17 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಹೋರಾಟದಲ್ಲಿ ಸೆರೆನಾರ ಹಿರಿಯ ಸಹೋದರಿ ವೀನಸ್ ವಿಲಿಯಮ್ಸ್‌ರನ್ನು 6-2, 6-3 ನೇರ ಸೆಟ್‌ಗಳಿಂದ ಮಣಿಸಿದ್ದಾರೆ. ಟೂರ್ನಿಯ ಆರಂಭಿಕ ಎರಡು ಸುತ್ತುಗಳಲ್ಲಿ ಪರದಾಟ ನಡೆಸಿದ್ದ ಹಾಲೆಪ್ ಈ ವರ್ಷದ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.

''ನನ್ನ ಪ್ರಕಾರ ನಾನು ಇಂದು ಶ್ರೇಷ್ಠ ಪ್ರದರ್ಶನ ನೀಡಿದ್ದೇನೆ. ನನ್ನ ಆಟದ ಶೈಲಿ ನನಗೆ ಖುಷಿ ತಂದಿದೆ. ವಿಲಿಯಮ್ಸ್ ಸಹೋದರಿಯರ ವಿರುದ್ಧ ಆಡುವುದು ಯಾವಾಗಲೂ ದೊಡ್ಡ ಸವಾಲಾಗಿರುತ್ತದೆ'' ಎಂದು ಫ್ರೆಂಚ್ ಓಪನ್ ಚಾಂಪಿಯನ್ ಹಾಲೆಪ್ ಹೇಳಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ತಲುಪಿದ್ದ ಹಾಲೆಪ್ ಈ ಟೂರ್ನಿ ಆರಂಭಕ್ಕೆ ಮೊದಲು ಸತತ 5 ಪಂದ್ಯಗಳಲ್ಲಿ ಸೋತಿದ್ದರು. ಇದು ಅವರ ವೃತ್ತಿಜೀವನದ ಕಹಿ ಕ್ಷಣವಾಗಿತ್ತು. ನವೊಮಿ ನಾಲ್ಕನೇ ಸುತ್ತಿಗೆ:  ಜಪಾನ್ ಆಟಗಾರ್ತಿ ನಯೊಮಿ ಒಸಾಕಾ ಶನಿವಾರ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ತೈವಾನ್‌ನ ಹಿರಿಯ ಆಟಗಾರ್ತಿ ಸಿಯ್ ಸು-ವೀ ಅವರನ್ನು 7-5, 4-6, 6-1 ಸೆಟ್‌ಗಳಿಂದ ಸದೆಬಡಿದರು. 21ರ ಹರೆಯದ ಯುಎಸ್ ಓಪನ್ ಚಾಂಪಿಯನ್ ಒಸಾಕಾ ಅಂತಿಮ-16ರ ಸುತ್ತಿನಲ್ಲಿ ಚೀನಾದ ವಾಂಗ್ ಖಿಯಾಂಗ್ ಅಥವಾ ಲಾಟ್ವಿಯದ ಅನಸ್ಟೇಸಿಜಾ ಸೆವಾಸ್ಟೋವಾರನ್ನು ಎದುರಿಸಲಿದ್ದಾರೆ. 2018ರಲ್ಲೂ ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಂತಿಮ-16ರ ಸುತ್ತು ತಲುಪಿದ್ದ ಒಸಾಕಾ ತನ್ನ ಶ್ರೇಷ್ಠ ಸಾಧನೆಯನ್ನು ಸರಿಗಟ್ಟಿದರು. ಕಳೆದ ವರ್ಷ ಅವರು ಅಂತಿಮ-16ರಲ್ಲಿ ವಿಶ್ವದ ನಂ.1 ಆಟಗಾರ್ತಿ ಹಾಲೆಪ್‌ಗೆ ಸೋತಿದ್ದರು.

ಗಾರ್ಬೈನ್ ಮುಗುರುಝಾಗೆ ವಿಜಯ

ಮೆಲ್ಬೋರ್ನ್, ಜ.19: ಎರಡು ಬಾರಿಯ ಗ್ರಾನ್‌ಸ್ಲಾಮ್ ವಿಜೇತ ಸ್ಪೇನ್‌ನ ಗಾರ್ಬೈನ್ ಮುಗುರುಝಾ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನ 16ರ ಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ. ಶನಿವಾರ ನಡೆದ ಮಹಿಳೆಯರ 3ನೇ ಸುತ್ತಿನ ಪಂದ್ಯದಲ್ಲಿ ಅವರಿ ಸ್ವಿಸ್‌ನ ಟೈಮಿಯಾ ಬ್ಯಾಕ್ಸಿನ್‌ಸ್ಕಿ ಅವರನ್ನು 7-6(7-5), 6-2 ಸೆಟ್‌ಗಳಿಂದ ಮಣಿಸಿದರು.

ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ 18ನೇ ಶ್ರೇಯಾಂಕದ ಮುಗುರುಝಾಗೆ ಮೊದಲ ಸೆಟ್‌ನಲ್ಲಿ ಪೈಪೋಟಿ ಎದುರಾದರೂ ಎರಡನೇ ಸೆಟ್‌ನಲ್ಲಿ ಸುಲಭದ ಜಯ ಸಾಧಿಸಿದರು. 25 ವರ್ಷ ವಯಸ್ಸಿನ ಮುಗುರುಝಾ ಅವರ 2ನೇ ಸುತ್ತಿನ ಪಂದ್ಯ ಬ್ರಿಟನ್‌ನ ಜೊಹಾನ್ನಾ ಕೊಂಟಾ ವಿರುದ್ಧ ನಡೆದಿತ್ತು. ಶುಕ್ರವಾರ ಮುಂಜಾನೆಯ 12:30ರ ವೇಳೆ ನಡೆದು ಇತಿಹಾಸ ಸೃಷ್ಟಿಸಿತ್ತು ಈ ಪಂದ್ಯ. ಜೊಹಾನ್ನಾ ಪಂದ್ಯ ನಡೆಸಿದ ವೇಳೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿ 'ಇದೊಂದು ಅಪಾಯಕಾರಿ ಹಾಗೂ ಅನಾರೋಗ್ಯಕರ'' ಎಂದಿದ್ದರು.

ಮುಗುರುಝಾ ತಮ್ಮ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಝೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೊವಾ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News