ಸೈನಾಗೆ ಸೋಲು: ಭಾರತದ ಸವಾಲು ಅಂತ್ಯ

Update: 2019-01-19 18:12 GMT

ಕೌಲಾಲಂಪುರ, ಜ.19: ಮಲೇಶ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‌ರ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಸ್ಪೇನ್‌ನ ಕರೊಲಿನಾ ಮರಿನ್ ಎದುರು ಸೈನಾ 16-21, 13-21 ನೇರ ಗೇಮ್‌ಗಳಿಂದ ಶರಣಾದರು. 28 ವರ್ಷದ ಹೈದರಾಬಾದ್ ಆಟಗಾರ್ತಿ ಸೈನಾ, ಕೇವಲ 40 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಮರಿನ್ ಎದುರು ಸೋಲುವ ಮೂಲಕ ಈ ಋತುವಿನ ಪ್ರಥಮ ವಿಶ್ವ ಟೂರ್ ಸೂಪರ್ 500 ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯ ಕಂಡಿದೆ.

5-5 ಸಮಾನ ಅಂತರದಿಂದ ಸಾಗುತ್ತಿದ್ದ ಪಂದ್ಯದಲ್ಲಿ ಸೈನಾ ಮತ್ತೆ 5 ಅಂಕ ಗಳಿಸಿದರು. ಈ ವೇಳೆ ಮರಿನ್ 2 ಅಂಕ ಗಳಿಸಿದರು. ನಂತರ ಆಕ್ರಮಣಕಾರಿಯಾದ ಮರಿನ್ 7 ನೇರ ಅಂಕಗಳನ್ನು ಗಳಿಸಿ ವಿರಾಮದ ವೇಳೆ 11-9 ಅಂಕಗಳಿಂದ ಮುನ್ನಡೆಯಲ್ಲಿದ್ದರು. ಸ್ಪೇನ್ ಆಟಗಾರ್ತಿ ನಂತರ 13-9ರ ಮುನ್ನಡೆ ಪಡೆದರು. ಸೈನಾ ಮತ್ತೆ ಅಂಕಗಳನ್ನು 14-14ಕ್ಕೆ ಸಮನಾಗಿಸಿದರು. ಆದರೆ ನಂತರ 7 ಅಂಕ ಗಳಿಸಿದ ಮರಿನ್, ಗೇಮ್ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನ ಆರಂಭದಲ್ಲೇ ಮರಿನ್ 6-1ರಿಂದ ಮುನ್ನಡೆ ಪಡೆದರು. ಮಧ್ಯಂತರದ ವೇಳೆಗೆ ಇದು 11-6 ಅಂಕಕ್ಕೆ ಬಂದು ನಿಂತಿತ್ತು. ಸೈನಾ ಮುನ್ನಡೆಗೆ ಮರಳಲು ಪ್ರಯತ್ನಪಟ್ಟರೂ ಸಾಧ್ಯವಾಗದೇ ಅಂತಿಮವಾಗಿ ಸೋಲೊಪ್ಪಿಕೊಳ್ಳಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News