ವೃತ್ತಿಪರ ಬಾಕ್ಸಿಂಗ್‌ಗೆ ವಿಕಾಸ್ ಯಶಸ್ವಿ ಪಾದಾರ್ಪಣೆ

Update: 2019-01-19 18:14 GMT

ಹೊಸದಿಲ್ಲಿ, ಜ.19: ಭಾರತದ ಬಾಕ್ಸರ್ ವಿಕಾಸ್ ಕ್ರಿಶನ್ ವೃತ್ತಿಪರ ಬಾಕ್ಸಿಂಗ್‌ಗೆ ಯಶಸ್ವಿ ಪಾದಾರ್ಪಣೆಗೈದಿದ್ದು, ತಾನಾಡಿದ ಮೊದಲ ಪಂದ್ಯದಲ್ಲೇ ಜಯ ದಾಖಲಿಸಿದರು.

ನ್ಯೂಯಾರ್ಕ್‌ನಲ್ಲಿ ನಡೆದ ತನ್ನ ಚೊಚ್ಚಲ ವೃತ್ತಿಪರ ಪಂದ್ಯದಲ್ಲಿ ವಿಕಾಸ್ ಅಮೆರಿಕದ ಎದುರಾಳಿ ಸ್ಟೀವನ್ ಆ್ಯಂಡ್ರೆಡ್‌ರನ್ನು ಟೆಕ್ನಿಕಲ್ ನಾಕೌಟ್ ಮೂಲಕ ಸೋಲಿಸಿದರು.

ವಿಕಾಸ್ ಲೆಜೆಂಡರಿ ಬಾಬ್ ಅರುಮ್ಸ್ ಅವರ ಟಾಪ್ ರ್ಯಾಂಕ್ ಪ್ರೊಮೊಶನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಆರು ಸುತ್ತಿನ ಸೂಪರ್ ವೆಲ್ಟರ್‌ವೇಟ್ ಸ್ಪರ್ಧೆಯಲ್ಲಿ ಚೊಚ್ಚಲ ಪಂದ್ಯವನ್ನಾಡಿದರು.

ಶುಕ್ರವಾರ ರಾತ್ರಿ ನ್ಯೂಯಾರ್ಕ್‌ನ ಸ್ಟೋನ್ ರೆಸಾರ್ಟ್ ಕ್ಯಾಸಿನೊದಲ್ಲಿ ವಿಕಾಸ್-ಸ್ಟೀವನ್ ನಡುವೆ ನಡೆದ ಪಂದ್ಯ ಎರಡೇ ಸುತ್ತಿನಲ್ಲಿ ಕೊನೆಗೊಂಡಿತು.

‘‘ನಾನು ಮೊದಲ ವೃತ್ತಿಪರ ಪಂದ್ಯವನ್ನು ಟೆಕ್ನಿಕಲ್ ನಾಕೌಟ್ ಮೂಲಕ ಗೆದ್ದುಕೊಂಡಿದ್ದೇನೆ. ನನ್ನ ಮೇಲೆ ಪ್ರೀತಿ ತೋರಿ ಬೆಂಬಲಿಸಿದ ಎಲ್ಲರಿಗೂ ಆಭಾರಿಯಾಗಿರುವೆ’’ ಎಂದು ಪಂದ್ಯದ ಬಳಿಕ ವಿಕಾಸ್ ಟ್ವೀಟ್ ಮಾಡಿದ್ದಾರೆ.

26ರ ಹರೆಯದ ವಿಕಾಸ್ ಭಾರತದ ಖ್ಯಾತ ಬಾಕ್ಸರ್ ಆಗಿದ್ದು, ಏಶ್ಯನ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿರುವ ವಿಕಾಸ್ ಹಲವು ಬಾರಿ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ್ದರು. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟಿರುವ ಏಕೈಕ ಬಾಕ್ಸರ್ ವಿಜೇಂದರ್ ಸಿಂಗ್ ಇಂಗ್ಲೆಂಡ್ ಹಾಗೂ ಭಾರತದಲ್ಲಿ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡ ಬಳಿಕ ಟಾಪ್ ರ್ಯಾಂಕ್ ಪ್ರೊಮೊಶನ್ಸ್ ನೊಂದಿಗೆ ಸಹಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News