ಚಾಂಪಿಯನ್ ಫೆಡರರ್‌ಗೆ ಆಘಾತಕಾರಿ ಸೋಲು

Update: 2019-01-20 18:20 GMT

ಆಸ್ಟ್ರೇಲಿಯನ್ ಓಪನ್

ಮೆಲ್ಬೋರ್ನ್, ಜ.20: ಹ್ಯಾಟ್ರಿಕ್ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ರೋಜರ್ ಫೆಡರರ್ ಗ್ರೀಕ್‌ನ ಯುವ ಆಟಗಾರ ಸ್ಟಿಫನೊಸ್ ಸಿಟ್‌ಸಿಪಾಸ್ ವಿರುದ್ಧ ಶರಣಾಗಿ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಹಿರಿಯ ಹಾಗೂ ಕಿರಿಯ ಆಟಗಾರನ ನಡುವಿನ ಪಂದ್ಯಕ್ಕೆ ವೇದಿಕೆಯಾಗಿದ್ದ ಮೆಲ್ಬೋರ್ನ್ ಪಾರ್ಕ್‌ನಲ್ಲಿ ರವಿವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 20ರ ಹರೆಯದ ಸ್ಟಿಫನೊಸ್ 37ರ ಹರೆಯದ ಫೆಡರರ್‌ರನ್ನು 6-7(11), 7-6(3), 7-5, 7-6(5) ಸೆಟ್‌ಗಳಿಂದ ಮಣಿಸಿ ಆಘಾತ ನೀಡಿದರು.

ಈ ಗೆಲುವಿನ ಮೂಲಕ ಸ್ಟ್ಟಿಫನೊಸ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಗ್ರೀಕ್‌ನ ಮೊದಲ ಟೆನಿಸ್ ತಾರೆ ಎಂಬ ದಾಖಲೆಯನ್ನೂ ಬರೆದರು.

14ನೇ ಶ್ರೇಯಾಂಕದ ಸ್ಟಿಫನೊಸ್ ವೃತ್ತಿಜೀವನದಲ್ಲಿ ಮೊದಲ ಬಾರಿ ದಿಗ್ಗಜ ಆಟಗಾರನನ್ನು ಮಣಿಸಿದ ಸಾಧನೆ ಮಾಡಿದರು. ಕಳೆದ ಬಾರಿ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲಿ ಕೆನಡಾದ ಡೆನಿಸ್ ಶಪವಾಲೊವ್ ವಿರುದ್ಧ ಸೋತು ಹೊರ ನಡೆದಿದ್ದ ಸ್ಟ್ಟಿಫನೊಸ್ ಸತತ ಮೂರನೇ ಹಾಗೂ ಒಟ್ಟಾರೆ 7ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯ ಬೇಟೆಯಲ್ಲಿದ್ದ ಫೆಡರರ್ ಪ್ರಿ-ಕ್ವಾರ್ಟರ್‌ನಲ್ಲಿ ಸೋತು ಹೊರ ನಡೆಯುವಂತೆ ಮಾಡಿದರು.

ನಡಾಲ್ ಕ್ವಾರ್ಟರ್‌ಗೆ

ಆಸ್ಟ್ರೇಲಿಯನ್ ಓಪನ್‌ನಲ್ಲಿ ತಮ್ಮ ಗೆಲುವಿನ ಓಟವನ್ನು ಮುಂದುವರಿಸಿರುವ ಸ್ಪೇನ್‌ನ ರಫೆಲ್ ನಡಾಲ್ ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವಿಶ್ವದ ಮಾಜಿ ನಂ.4 ಆಟಗಾರ ಥಾಮಸ್ ಬೆರ್ಡಿಕ್ ಅವರನ್ನು ಬಗ್ಗುಬಡಿದು ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಎರಡನೇ ಶ್ರೇಯಾಂಕದ ನಡಾಲ್ ಸತತ 9 ಗೇಮ್‌ಗಳನ್ನು ಗೆದ್ದು ಝೆಕ್ ಗಣರಾಜ್ಯದ ಆಟಗಾರನನ್ನು 6-0, 6-1, 7-6(7/4) ಸೆಟ್‌ಗಳಿಂದ ಮಣಿಸಿದರು. ಪಂದ್ಯ 2 ಗಂಟೆ 5 ನಿಮಿಷಗಳ ಕಾಲ ನಡೆಯಿತು.

ಮೂರನೇ ಸೆಟ್‌ನಲ್ಲಿ 9 ಹಾಗೂ 11ನೇ ಗೇಮ್‌ನಲ್ಲಿ ಗೆಲ್ಲುವ ಮೂಲಕ ಅಲ್ಪ ಒತ್ತಡವನ್ನು ಬೆರ್ಡಿಕ್ ಅವರು ಕಡಿಮೆ ಮಾಡಿಕೊಂಡರು. ಆದರೆ ಅದಾಗಲೇ ನಡಾಲ್ ಗೆದ್ದಾಗಿತ್ತು. ಎಲ್ಲ ನಾಲ್ಕೂ ಗ್ರಾನ್‌ಸ್ಲಾಮ್‌ಗಳನ್ನು ಎರಡೆರಡು ಬಾರಿ ಗೆದ್ದು ದಾಖಲೆ ಬರೆಯಬೇಕೆಂಬ ಉತ್ಸಾಹದಲ್ಲ್ಲಿರುವ ನಡಾಲ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರು. ಅಂಕಗಳ ಮಧ್ಯೆ ನಡಾಲ್ ಅನವಶ್ಯಕ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಂಪೈರ್‌ಗೆ ಬೆರ್ಡಿಕ್ ದೂರು ನೀಡಿದ ಘಟನೆಯೂ ನಡೆಯಿತು. ನಡಾಲ್ ತಮ್ಮ ಮುಂದಿನ ಪಂದ್ಯದಲ್ಲಿ ದೈತ್ಯ ಸಂಹಾರಿ ಅಮೆರಿಕದ ಫ್ರಾನ್ಸಿಸ್ ಟೈಫೊಯ್ ಅವರನ್ನು ಎದುರಿಸಲಿದ್ದಾರೆ. ಟೈಫೊಯ್ ರವಿವಾರ ನಡೆದ ಮತ್ತೊಂದು ಪಂದ್ಯದಲ್ಲಿ 20ನೇ ಶ್ರೇಯಾಂಕದ ಗ್ರಿಗೊರ್ ಡಿಮಿಟ್ರಿವ್ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಪಂದ್ಯದ ನಂತರ ಪ್ರತಿಕ್ರಿಯಿಸಿದ ನಡಾಲ್, ‘‘ಧನಾತ್ಮಕ ಅಥವಾ ಋಣಾತ್ಮಕ ಅಂಶಗಳ ನಿರೀಕ್ಷೆ ಮಾಡುವುದಿಲ್ಲ ನಾನು ಯಾವಾಗಲೂ ಹೇಳುತ್ತೇನೆ’’ ಎಂದರು.

ಶರಪೋವಾಗೆ ಆಘಾತ ನೀಡಿದ ಬಾರ್ಟಿ

ತ ವರು ಪ್ರೇಕ್ಷಕರ ಬೆಂಬಲದಿಂದ ಉತ್ಸಾಹಗೊಂಡ ಆ್ಯಶ್ಲೆ ಬಾರ್ಟಿ ಅವರು ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಪಂದ್ಯದಲ್ಲಿ ವಿಶ್ವದ ಮಾಜಿ ನಂ. 1 ತಾರೆ ರಶ್ಯದ ಮರಿಯಾ ಶರಪೋವಾಗೆ ಆಘಾತ ನೀಡುವ ಮೂಲಕ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ರವಿವಾರ ಇಲ್ಲಿಯ ರೊಡ್ ಲಾವರ್ ಅರೇನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಲಯದಲ್ಲಿರುವ 15ನೇ ಶ್ರೇಯಾಂಕದ ಆಸ್ಟ್ರೇಲಿಯದ ಬಾರ್ಟಿ, ರಶ್ಯ ಆಟಗಾರ್ತಿಯನ್ನು 4-6, 6-1, 6-4 ಸೆಟ್‌ಗಳ ಅಂತರದಿಂದ ಮಣಿಸಿ ಪಾರಮ್ಯ ಮೆರೆದರು. ಈ ಮೂಲಕ ಶರಪೋವಾ ಅವರ ಆಸ್ಟ್ರೇಲಿಯನ್ ಓಪನ್ ಅಭಿಯಾನಕ್ಕೆ ಅಂತ್ಯ ಹಾಡಿದರು.

2017ರಲ್ಲಿ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಅಮಾನತು ಶಿಕ್ಷೆ ಮುಗಿಸಿ ವಾಪಸಾಗಿರುವ ಶರಪೋವಾ, ಆಸ್ಟ್ರೇಲಿಯನ್ ಓಪನ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೋಝ್ನಿಯಾಕಿ ಅವರನ್ನು ಮಣಿಸಿ ಪ್ರಾಬಲ್ಯ ಮೆರೆದಿದ್ದರು. ಆದರೆ ಈ ದಿನ ಅದೇ ಪ್ರದರ್ಶನ ಮುಂದುವರಿಸುವಲ್ಲಿ ಅವರು ವಿಫಲರಾದರು. 30ನೇ ಶ್ರೇಯಾಂಕದ ಶರಪೋವಾ ಮೊದಲ ಗೇಮ್‌ನ್ನು ಗೆದ್ದುಕೊಂಡರು. ಈ ವೇಳೆ ಪ್ರೇಕ್ಷಕರು ಅತಿಯಾಗಿ ಕೂಗಿ ಶರಪೋವಾಗೆ ಅಪಹಾಸ್ಯ ಮಾಡುವ ರೀತಿಯಲ್ಲಿ ವರ್ತಿಸಿದ್ದರು. ಎರಡು ಹಾಗೂ ಮೂರನೇ ಸೆಟ್‌ಗಳಲ್ಲಿ ಬಾರ್ಟಿಗೆ ಶರಣಾದ ಅವರು, ಪಂದ್ಯವನ್ನು ಕೈ ಚೆಲ್ಲಿದರು. 22 ವರ್ಷದ ಬಾರ್ಟಿ, ಈ ವರ್ಷ ತಾನಾಡಿದ 8 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಝೆಕ್‌ನ ಪೆಟ್ರಾ ಕ್ವಿಟೊವಾರನ್ನು ಎದುರಿಸಲಿದ್ದಾರೆ.

ಅಗುಟ್ ಜಯಭೇರಿ

►ಸಿಲಿಕ್ ಹೊರಕ್ಕೆ

ಆರನೇ ಶ್ರೇಯಾಂಕದ ಕ್ರೊಯೇಶ್ಯ ಆಟಗಾರ ಮರಿನ್ ಸಿಲಿಕ್ ಅವರನ್ನು ಸ್ಪೇನ್‌ನ 22ನೇ ಶ್ರೇಯಾಂಕದ ರಾಬರ್ಟೊ ಬೌಟಿಸ್ಟಾ ಅಗುಟ್ ಮಣಿಸಿ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ರವಿವಾರ ಇಲ್ಲಿನ ಮಾರ್ಗರೇಟ್ ಕೋರ್ಟ್ ಅರೆನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮರಿನ್ ಅವರನ್ನು 6-7(6), 6-3, 6-2, 4-6, 6-4 ಸೆಟ್‌ಗಳಿಂದ ಮಣಿಸಿದ ಅಗುಟ್ ಸಂತಸದಿಂದ ಕುಣಿದಾಡಿದರು. ಬ್ರಿಟನ್‌ನ ಗಾಯಾಳು ಆಟಗಾರ ಆ್ಯಂಡಿ ಮರ್ರೆಗೆ ಪ್ರಥಮ ಸುತ್ತಿನ ಪಂದ್ಯದಲ್ಲಿಯೇ ಅಗುಟ್ ಸೋಲುಣಿಸಿದ್ದರು. ತಮ್ಮ ಮುಂದಿನ ಪಂದ್ಯದಲ್ಲಿ ಅಗುಟ್, ಗ್ರೀಕ್ ಆಟಗಾರ ್ಟ

ಸ್ಟಿಫನೊಸ್ ಅವರನ್ನು ಎದುರಿಸಲಿದ್ದಾರೆ. ಸ್ಟಿಫನೊಸ್ ಇನ್ನೊಂದು ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ದೈತ್ಯ ಆಟಗಾರ ರೋಜರ್ ಫೆಡರರ್ ಅವರಿಗೆ ಸೋಲುಣಿಸಿ ಕ್ವಾರ್ಟರ್‌ಗೆ ಮುನ್ನುಗ್ಗಿದರು.

ಕೆರ್ಬರ್‌ಗೆ ಸೋಲು

ಅಮೆರಿಕದ ಶ್ರೇಯಾಂಕರಹಿತ ಆಟಗಾರ್ತಿ ಡ್ಯಾನಿಲ್ಲೆ ಕಾಲಿನ್ಸ್ ಅವರಿಗೆ 0-6, 2-6 ನೇರ ಸೆಟ್‌ಗಳಿಂದ ಮಣಿದ 2016ರ ಚಾಂಪಿಯನ್ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದಿಂದ ಹೊರ ನಡೆದಿದ್ದಾರೆೆ. ಕಾಲಿನ್ಸ್ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು.

ತಾನಾಡಿದ ಈ ಹಿಂದಿನ ಗ್ರಾನ್‌ಸ್ಲಾಮ್‌ಗಳಲ್ಲಿ ಒಂದೂ ಪಂದ್ಯ ಗೆಲ್ಲದ 25 ವರ್ಷ ವಯಸ್ಸಿನ ಕಾಲಿನ್ಸ್ ಈ ಪಂದ್ಯದಲ್ಲಿ ಮೂರು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಕೆರ್ಬರ್ ಅವರನ್ನು ಸೋಲಿಸುವ ಮೂಲಕ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಮೊದಲ ಬಾರಿಗೆ ಎಂಟರಘಟ್ಟ ತಲುಪಿದ ಸಾಧನೆ ಮಾಡಿದರು. ಮೂರು ಸರ್ವಿಸ್ ಬ್ರೇಕ್‌ಗಳೊಂದಿಗೆ ಪ್ರಥಮ ಸೆಟನ್ನು 20 ನಿಮಿಷಗಳಲ್ಲಿ ವಶಪಡಿಸಿಕೊಂಡ ಕಾಲಿನ್ಸ್, ಎರಡನೇ ಸೆಟ್‌ನಲ್ಲಿ ಎದುರಾಳಿಗೆ ಕೇವಲ ಎರಡು ಗೇಮ್‌ಗಳನ್ನು ಬಿಟ್ಟುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News