ಖೇಲೋ ಇಂಡಿಯಾ ಯೂತ್ ಗೇಮ್ಸ್‌: ಆತಿಥೇಯ ಮಹಾರಾಷ್ಟ್ರಕ್ಕೆ ಸಮಗ್ರ ಪ್ರಶಸ್ತಿ

Update: 2019-01-20 18:22 GMT

ಪುಣೆ, ಜ.20: ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ 85 ಚಿನ್ನದ ಜೊತೆಗೆ 62 ಬೆಳ್ಳಿ ಹಾಗೂ 81 ಕಂಚು ಸಹಿತ ಒಟ್ಟು 228 ಪದಕಗಳನ್ನು ಜಯಿಸಿರುವ ಆತಿಥೇಯ ಮಹಾರಾಷ್ಟ್ರ ಸಮಗ್ರ ಟ್ರೋಫಿ ಬಾಚಿಕೊಂಡಿದೆ.

ಮಹಾರಾಷ್ಟ್ರ ತಂಡದ ಕ್ರೀಡಾಳುಗಳು ಹಾಗೂ ಅಧಿಕಾರಿಗಳು ಕೇಂದ್ರ ಎಚ್‌ಆರ್‌ಡಿ ಸಚಿವ ಪ್ರಕಾಶ್ ಜಾವಡೇಕರ್, ರಾಜ್ಯ ಕ್ರೀಡಾ ಹಾಗೂ ಯುವಜನ ವ್ಯವಹಾರ ಸಚಿವರಿಂದ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಟ್ರೋಫಿ ಸ್ವೀಕರಿಸಿದ್ದಾರೆ.

ಮಹಾರಾಷ್ಟ್ರ ತಂಡ 2018ರ ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್ ಚಾಂಪಿಯನ್ಸ್ ಹರ್ಯಾಣವನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದುಕೊಂಡಿದೆ. ಹರ್ಯಾಣ 62 ಚಿನ್ನ, 56 ಬೆಳ್ಳಿ ಹಾಗೂ 60 ಕಂಚು ಸಹಿತ ಒಟ್ಟು 178 ಪದಕಗಳನ್ನು ಜಯಿಸಿ 2ನೇ ಸ್ಥಾನ ಪಡೆದಿದೆ. 48 ಚಿನ್ನ, 37 ಬೆಳ್ಳಿ ಹಾಗೂ 51 ಕಂಚು ಸಹಿತ ಒಟ್ಟು 136 ಪದಕಗಳನ್ನು ಪಡೆದಿರುವ ದಿಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಈ ವರ್ಷದ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಸುಮಾರು 10,000 ಮಂದಿ ಭಾಗಿಯಾಗಿದ್ದು ಇದರಲ್ಲಿ 5,925ಕ್ಕೂ ಅಧಿಕ ಅಥ್ಲೀಟ್‌ಗಳು, 1,096 ಸಹಾಯಕ ಸಿಬ್ಬಂದಿ, 893 ತಾಂತ್ರಿಕ ಅಧಿಕಾರಿಗಳು, 36 ಚೀಫ್‌ಡಿ ಮಿಶನ್ಸ್, 1010 ಸ್ವಯಂಸೇವಕರು ಹಾಗೂ 1,500 ಅಧಿಕಾರಿಗಳು ಸೇರಿದ್ದಾರೆ. ಗೇಮ್ಸ್ ಯಶಸ್ವಿಯಾಗಿ ನೆರವೇರಲು ಅದ್ಭುತ ಪ್ರಯತ್ನ ನಡೆಸಿರುವ ಮಹಾರಾಷ್ಟ್ರ ಸರಕಾರ ಹಾಗೂ ಸಾವಿರಾರು ಸ್ವಯಂಸೇವಕರಿಗೆ ಕೃತಜ್ಞತೆಗಳು ಎಂದು ಭಾರತ ಕ್ರೀಡಾ ಪ್ರಾಧಿಕಾರದ(ಸಾಯ್)ಪ್ರಧಾನ ನಿರ್ದೇಶಕಿ ನೀಲಂ ಕಪೂರ್ ಹೇಳಿದ್ದಾರೆ.

ಕೊನೆಯ ದಿನದಲ್ಲಿ ಪಣಕ್ಕಿಡಲಾಗಿದ್ದ 15 ಚಿನ್ನದ ಪದಕದ ಪೈಕಿ 8 ಪದಕ ಆರ್ಚರಿ ವಿಭಾಗದ ಪಾಲಾಗಿದೆ.ಆತಿಥೇಯ ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಹರ್ಯಾಣ ತಲಾ 2, ದಿಲ್ಲಿ ಹಾಗೂ ಪಂಜಾಬ್ ತಲಾ 1 ಪದಕ ಜಯಿಸಿದೆ. ಹರ್ಯಾಣ ಹಾಕಿ ತಂಡ ತನ್ನ ಪಾರಮ್ಯ ಮೆರೆದಿದ್ದು 21 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಚಿನ್ನ ಜಯಿಸಿದ್ದು, 4 ಫೈನಲ್‌ಗಳಲ್ಲಿ ಮೂರು ಚಿನ್ನ ಜಯಿಸಿದೆ. ಉತ್ತರ ಪ್ರದೇಶ, ಪಶ್ಚಿಮಬಂಗಾಳ, ತಮಿಳುನಾಡು ಹಾಗೂ ಕೇರಳ ವಾಲಿಬಾಲ್‌ನಲ್ಲಿ ತಲಾ ಒಂದು ಚಿನ್ನ ಗೆದ್ದುಕೊಂಡಿವೆ. ಟೇಬಲ್ ಟೆನಿಸ್‌ನ ಅಂಡರ್-21ರ ವಿಭಾಗದಲ್ಲಿ ಗುಜರಾತ್‌ನ ಮನುಶ್ ಶಾ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News