ಕೀನ್ಯದ ಕಾಸ್ಮಸ್ ಪುರುಷರ ಚಾಂಪಿಯನ್

Update: 2019-01-20 18:26 GMT

ಮುಂಬೈ, ಜ.20: ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಕೀನ್ಯದ ಕಾಸ್ಮಸ್ ಲಗಾಟ್ ಹಾಗೂ ಇಥಿಯೋಪಿಯದ ವರ್ಕ್‌ನೆಶ್ ಅಲೆಮು ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗದ ಚಾಂಪಿಯನ್ ಕಿರೀಟ ಧರಿಸಿದ್ದಾರೆ.

2016ರ ಸೆವಿಲ್ಲಾ ಮ್ಯಾರಥಾನ್ ವಿಜೇತ ಕೀನ್ಯದ ಲಗಾಟ್ ವಾಣಿಜ್ಯ ನಗರಿ ಮುಂಬೈನಲ್ಲಿ ರವಿವಾರ ನಡೆದ 42.195 ಕಿ.ಮೀ. ದೂರದ ಮ್ಯಾರಥಾನ್‌ನಲ್ಲಿ 2 ಗಂಟೆ, 9 ನಿಮಿಷ, 15 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದಾರೆ. ಇದು 16 ವರ್ಷಗಳ ಇತಿಹಾಸದಲ್ಲಿ ಎರಡನೇ ಶ್ರೇಷ್ಠ ಪ್ರದರ್ಶನವಾಗಿದೆ.

ಲಗಾಟ್ ದೇಶದ ಗಿಡೆಯೊನ್ ಕಿಪ್‌ಕೆಟಾರ್ 2016ರಲ್ಲಿ 2:08:35 ಸೆಕೆಂಡ್‌ನಲ್ಲಿ ಗುರಿ ತಲುಪಿದ ಸಾಧನೆ ಮಾಡಿದ್ದರು. ಪುರುಷರ ಮ್ಯಾರಥಾನ್‌ನಲ್ಲಿ ಇಥಿಯೋಪಿಯದ ಅಚೆವ್ ಬೆಂಟಿ(2:10:05) ಹಾಗೂ ಅಕೆಲ್‌ನ್ಯೂ ಶುಮೆಟ್(2:10:14)ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ.

ಮಹಿಳೆಯರ ಮ್ಯಾರಥಾನ್‌ನಲ್ಲಿ ಇಥಿಯೋಪಿಯದ ಓಟಗಾರ್ತಿಯರು ಪ್ರಾಬಲ್ಯ ಮೆರೆದಿದ್ದು ಮೊದಲ ಮೂರು ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ವರ್ಕ್‌ನೆಶ್ ಅಲೆಮು 2 ಗಂಟೆ, 25 ನಿಮಿಷ, 45 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಅಮಾನೆ ಗೊಬೆನಾ(2:26:09) ಹಾಗೂ ಬಿರ್ಕ್ ಡೆಬೆಲೆ(2:26:39)ಕ್ರಮವಾಗಿ ಎರಡು ಹಾಗೂ 3ನೇ ಸ್ಥಾನ ಪಡೆದಿದ್ದಾರೆ.

ಸುಧಾ ಸಿಂಗ್‌ಗೆ ಮೊದಲ ಸ್ಥಾನ

ಭಾರತದ ಓಟಗಾರ್ತಿಯರ ಪೈಕಿ ಸುಧಾ ಸಿಂಗ್ ಜೀವನಶ್ರೇಷ್ಠ ಪ್ರದರ್ಶನ (2:34:56)ನೀಡಿ ಮೊದಲ ಸ್ಥಾನ ಪಡೆದರು. ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ನಡೆಯುವ ದೋಹಾ ವರ್ಲ್ಡ್ ಚಾಂಪಿಯನ್‌ಶಿಪ್‌ಗೆ ಐಎಎಎಫ್ ನಿಗದಿಪಡಿಸಿದ ಅರ್ಹತಾ ಸಮಯದೊಳಗೆ(2:37:00)ಗುರಿ ತಲುಪಿದ್ದಾರೆ.

3,000 ಮೀ. ಸ್ಟೀಪಲ್‌ಚೇಸ್ ಸ್ಪೆಷಲಿಸ್ಟ್ ಹಾಗೂ ಎರಡು ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿರುವ ಸುಧಾ ಸಿಂಗ್ ಒಟ್ಟಾರೆ 8ನೇ ಸ್ಥಾನ ಪಡೆದರು. ಮಾಜಿ ಚಾಂಪಿಯನ್ ಡಿಂಕೇಶ್ ಮೆಕಾಶ್‌ರನ್ನು(2:36:31)ಹಿಂದಿಕ್ಕಿದರು. ಮೆಕಾಶ್ 9ನೇ ಸ್ಥಾನ ಪಡೆದಿದ್ದಾರೆ. ಸುಧಾ ಸಿಂಗ್ ಮುಂಬೈ ಮ್ಯಾರಥಾನ್‌ನಲ್ಲಿ ಮೂರನೇ ಬಾರಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ಅಥ್ಲೀಟ್ ಎನಿಸಿಕೊಂಡರು. ಈ ಮೂಲಕ ಲಲಿತಾ ಬಬರ್ ದಾಖಲೆಯನ್ನು ಸರಿಗಟ್ಟಿದರು. 2012 ಹಾಗೂ 2014ರ ನಡುವೆ ಲಲಿತಾ ಮೂರು ಬಾರಿ ಮ್ಯಾರಥಾನ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News