ಮಾಸ್ಕೋದಲ್ಲಿ ಟ್ರಂಪ್ ಟವರ್ ಬಗ್ಗೆ ಚುನಾವಣೆವರೆಗೂ ಮಾತುಕತೆ: ಟ್ರಂಪ್ ವಕೀಲ

Update: 2019-01-21 17:06 GMT

ವಾಶಿಂಗ್ಟನ್, ಜ. 21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ 2016ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಅವಧಿಯುದ್ದಕ್ಕೂ ಮಾಸ್ಕೋದಲ್ಲಿ ‘ಟ್ರಂಪ್ ಟವರ್’ ಒಂದನ್ನು ನಿರ್ಮಿಸುವ ಯೋಜನೆಯ ಬಗ್ಗೆ ಮಾತುಕತೆ ನಡೆಸುತ್ತಿದ್ದರು ಎಂದು ಅವರ ವಕೀಲರು ರವಿವಾರ ಹೇಳಿದ್ದಾರೆ.

ಈ ವಿಷಯದ ಬಗ್ಗೆ ಟ್ರಂಪ್ ತನ್ನ ಅಂದಿನ ಖಾಸಗಿ ವಕೀಲ ಮೈಕಲ್ ಕೋಹನ್ ಜೊತೆ ಮಾತುಕತೆ ನಡೆಸುತ್ತಿದ್ದರು. ಕೋಹನ್ ಮಾಸ್ಕೋದಲ್ಲಿ ಟ್ರಂಪ್ ಪರವಾಗಿ ಮಾತುಕತೆಗಳನ್ನು ನಡೆಸುತ್ತಿದ್ದರು ಎಂದು ವಕೀಲ ರೂಡಿ ಜಿಯುಲಿಯನಿ ತಿಳಿಸಿದರು.

ಈ ಮಾತುಕತೆಗಳು 2016 ಅಕ್ಟೋಬರ್ ಅಥವಾ ನವೆಂಬರ್‌ವರೆಗೆ ವರ್ಷವಿಡೀ ನಡೆದಿದ್ದವು.

ಅಮೆರಿಕದ ಸಂಸತ್ತು ಕಾಂಗ್ರೆಸ್‌ಗೆ ಸುಳ್ಳು ಹೇಳಿರುವುದಕ್ಕಾಗಿ ಮೈಕಲ್ ಕೋಹನ್ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ರಶ್ಯದೊಂದಿಗಿನ ಮಾತುಕತೆಗಳು 2016 ಜನವರಿಯಲ್ಲಿ ಮುಗಿದಿದ್ದವು ಎಂದು ಅವರು ಕಾಂಗ್ರೆಸ್‌ನಲ್ಲಿ ಹೇಳಿದ್ದರು.

ಆದರೆ, ಈ ಮಾತುಕತೆಗಳು 2016 ಜೂನ್‌ವರೆಗೂ ಮುಂದುವರಿದಿದ್ದವು ಎಂಬುದಾಗಿ ಅವರು ಬಳಿಕ ಒಪ್ಪಿಕೊಂಡಿದ್ದರು.

ಆದರೆ, ಈಗ ಲಭಿಸಿರುವ ಹೊಸ ಮಾಹಿತಿಗಳ ಪ್ರಕಾರ, ಈ ಮತುಕತೆಗಳು 2016 ನವೆಂಬರ್‌ನಲ್ಲಿ ಚುನಾವಣೆ ನಡೆಯುವವರೆಗೂ ಮುಂದುವರಿದಿದ್ದವು.

ರಶ್ಯ ಜೊತೆ ಯಾವುದೇ ವ್ಯಾಪಾರ ವ್ಯವಹಾರ ಇಲ್ಲ ಎಂಬುದಾಗಿ ಟ್ರಂಪ್ ಈ ಮೊದಲು ಘೋಷಿಸಿರುವ ಹಿನ್ನೆಲೆಯಲ್ಲಿ, ಮಾಸ್ಕೋದ ಟ್ರಂಪ್ ಟವರ್ ಪ್ರಸ್ತಾಪ ಮಹತ್ವ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News