ಸಿರಿಯದಲ್ಲಿರುವ ಇರಾನ್ ಪಡೆಗಳ ಮೇಲೆ ಇಸ್ರೇಲ್ ದಾಳಿ

Update: 2019-01-21 17:11 GMT

ಬೈರೂತ್, ಜ. 21: ಸಿರಿಯದಲ್ಲಿರುವ ಇರಾನ್‌ನ ‘ಕುದ್ಸ್’ ಪಡೆಗಳನ್ನು ಗುರಿಯಾಗಿಸಿ ರವಿವಾರ ರಾತ್ರಿ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಠ 11 ಸಿರಿಯ ಪರ ಸೈನಿಕರು ಹತರಾಗಿದ್ದಾರೆ ಎಂದು ಬ್ರಿಟನ್‌ನಲ್ಲಿ ನೆಲೆಸಿರುವ ಸಿರಿಯ ಮಾನವ ಹಕ್ಕುಗಳ ವೀಕ್ಷಣಾಲಯ ಸೋಮವಾರ ಹೇಳಿದೆ.

ಅದೇ ವೇಳೆ, ಇಸ್ರೇಲ್ ಭೂಭಾಗ ಅಥವಾ ಪಡೆಗಳ ಮೇಲೆ ದಾಳಿ ನಡೆಸದಂತೆ ಇಸ್ರೇಲ್ ಸೇನೆಯು ಸಿರಿಯ ಪಡೆಗಳಿಗೆ ಎಚ್ಚರಿಕೆ ನೀಡಿದೆ.

ನಿರ್ದೇಶಿತ ಕ್ಷಿಪಣಿಗಳನ್ನು ನಿರಂತರವಾಗಿ ಹಾರಿಸುವ ಮೂಲಕ ಇಸ್ರೇಲ್ ತೀವ್ರ ದಾಳಿ ನಡೆಸಿದೆ ಎಂಬುದಾಗಿ ಸಿರಿಯ ಸೇನಾ ಮೂಲಗಳನ್ನು ಉಲ್ಲೇಖಿಸಿ ಸಿರಿಯದ ಸರಕಾರಿ ಮಾಧ್ಯಮ ವರದಿ ಮಾಡಿದೆ. ಆದರೆ, ಹೆಚ್ಚಿನ ಕ್ಷಿಪಣಿಗಳನ್ನು ಸಿರಿಯದ ವಾಯು ರಕ್ಷಣಾ ವ್ಯವಸ್ಥೆಯು ನಾಶಪಡಿಸಿದೆ ಎಂದು ಅದು ಹೇಳಿದೆ.

ಸಿರಿಯದ ರಾತ್ರಿ ಆಕಾಶದಲ್ಲಿ ಒಂದು ಗಂಟೆ ಕಾಲ ಭಾರೀ ಸ್ಫೋಟಗಳು ಕೇಳಿಬಂದವು ಎಂದು ರಾಜಧಾನಿ ಡಮಾಸ್ಕಸ್‌ನಲ್ಲಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ರವಿವಾರ ಗಡಿಯಾಚೆಯಿಂದ ನಡೆದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಪ್ರತಿ ದಾಳಿ ನಡೆಸಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಇಸ್ರೇಲ್‌ನ ವಾಯು ದಾಳಿಯೊಂದನ್ನು ಹಿಮ್ಮೆಟ್ಟಿಸಿರುವುದಾಗಿ ಸಿರಿಯ ಹೇಳಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ. ಗೋಲನ್ ಹೈಟ್ಸ್‌ನಲ್ಲಿ ಸಿಡಿಸಲಾದ ಕ್ಷಿಪಣಿಯೊಂದನ್ನು ತಡೆದಿರುವುದಾಗಿ ಇಸ್ರೇಲ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News