×
Ad

ಬ್ಯಾಡ್ಮಿಂಟನ್: ಸಿಂಧು, ಸೈನಾ, ಶ್ರೀಕಾಂತ್ ಕ್ವಾರ್ಟರ್‌ಗೆ

Update: 2019-01-24 23:38 IST

ಜಕಾರ್ತ, ಜ.24: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು,ಸೈನಾ ನೆಹ್ವಾಲ್ ಹಾಗೂ ಕೆ. ಶ್ರೀಕಾಂತ್ ತಮ್ಮ ಎದುರಾಳಿಗಳನ್ನು ನೇರ ಗೇಮ್‌ಗಳಿಂದ ಮಣಿಸಿ ಗುರುವಾರ ಇಂಡೋನೇಶ್ಯ ಮಾಸ್ಟರ್ಸ್ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಸ್ಥಳೀಯ ಪ್ರತಿಭೆ ಗ್ರೆಗೊರಿಯಾ ಮರಿಸ್ಕಾ ತನ್‌ಜುಂಗ್ ಅವರನ್ನು ಕೇವಲ 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು, 23-21, 21-7 ಗೇಮ್‌ಗಳಿಂದ ಸೋಲಿಸಿ ಪ್ರಾಬಲ್ಯ ಮೆರೆದರು. 8ನೇ ಶ್ರೇಯಾಂಕದ ಕಿಡಂಬಿ ಶ್ರೀಕಾಂತ್ ಅವರು ಏಶ್ಯನ್ ಗೇಮ್ಸ್ ಕಂಚು ವಿಜೇತ ಜಪಾನ್‌ನ ಕೆಂಟಾ ನಿಶಿಮೊಟೊ ಅವರಿಗೆ ಮಣ್ಣುಮುಕ್ಕಿಸಿದರು. ತಮ್ಮ ಆರಂಭಿಕ ಪಂದ್ಯದಲ್ಲಿ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಲೀ ಕ್ಸುರುಯ್ ಅವರನ್ನು ಅತ್ಯುನ್ನತ ಪ್ರದರ್ಶನ ನೀಡಿ ಮಣಿಸಿದ್ದ ಸಿಂಧು, ಈ ಪಂದ್ಯದಲ್ಲಿ ಎದುರಾಳಿ ತನ್‌ಜುಂಗ್‌ರಿಂದ ಕಠಿಣ ಸ್ಪರ್ಧೆ ಎದುರಿಸಿದರು.

ಕಾಮನ್‌ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್ ಹಾಗೂ ಏಶ್ಯನ್ ಗೇಮ್ಸ್‌ಗಳಲ್ಲಿ ಬೆಳ್ಳಿ ಹಾಗೂ ವಿಶ್ವ ಟೂರ್ ಫೈನಲ್‌ನಲ್ಲಿ ಪ್ರಶಸ್ತಿ ಗೆದ್ದಿರುವ 23 ವರ್ಷದ ಹೈದರಾಬಾದ್ ಬೆಡಗಿ ಸಿಂಧು, ತಮ್ಮ ಮುಂದಿನ ಪಂದ್ಯದಲ್ಲಿ ಬದ್ಧ ಎದುರಾಳಿ ಸ್ಪೇನ್‌ನ ಕರೊಲಿನಾ ಮರಿನ್‌ರನ್ನು ಎದುರಿಸುವ ಸಾಧ್ಯತೆಯಿದೆ.

ಮತ್ತೊಂದೆಡೆ ಸೈನಾ ನೆಹ್ವಾಲ್ ಅವರು ಇಂಡೋನೇಶ್ಯದವರೇ ಆದ ಫಿಟ್ರಿಯಾನಿ ಫಿಟ್ರಿಯಾನಿ ಅವರನ್ನು 21-17, 21-15 ಗೇಮ್‌ಗಳಿಂದ ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟಿದ್ದಾರೆ.

ಶ್ರೀಕಾಂತ್ ತಮ್ಮ ಮುಂದಿನ ಪಂದ್ಯದಲ್ಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಇಂಡೋನೇಶ್ಯದ ಜೋನಾಥನ್ ಕ್ರಿಸ್ಟಿ ಅಥವಾ ಚೀನಾದ ಶಿ ಯುಕಿ ಅವರನ್ನು ಎದುರಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News