ಪುರುಷರ ಸಿಂಗಲ್ಸ್ ಫೈನಲ್‌: ಜೊಕೊವಿಕ್‌ಗೆ ನಡಾಲ್ ಎದುರಾಳಿ

Update: 2019-01-25 17:56 GMT

ಮೆಲ್ಬೋರ್ನ್, ಜ.25: ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್ ಅಂತಿಮ ಹಂತ ತಲುಪಿದ್ದು, ರವಿವಾರ ನಡೆಯುವ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಸ್ಪೇನ್‌ನ ನಂ.2ನೇ ಆಟಗಾರ ರಫೆಲ್ ನಡಾಲ್ ಸವಾಲು ಎದುರಿಸಲಿದ್ದಾರೆ.

ಮೆಲ್ಬೋರ್ನ್ ಪಾರ್ಕ್‌ನಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ಫ್ರಾನ್ಸ್‌ನ ಲುಕಾಸ್ ಪೌಲ್ಲಿ ಅವರನ್ನು 6-0, 6-2, 6-2 ನೇರ ಸೆಟ್‌ಗಳಿಂದ ಮಣಿಸಿದರು. ಈ ಮೂಲಕ ಏಳನೇ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ. ಆರು ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿರುವ ಜೊಕೊವಿಕ್ ಶುಕ್ರವಾರ ಒಂದು ಗಂಟೆ, 23 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಮೂರು ಸೆಟ್‌ಗಳ ಅಂತರದ ಜಯ ದಾಖಲಿಸಿದರು. ಮೆಲ್ಬೋರ್ನ್ ಪಾರ್ಕ್‌ನಲ್ಲಿ ಆಡಿದ ಏಳೂ ಸೆಮಿ ಫೈನಲ್ ಪಂದ್ಯವನ್ನು ಜಯಿಸಿ ಅಜೇಯ ದಾಖಲೆ ಕಾಯ್ದುಕೊಂಡರು.

ಗ್ರಾನ್‌ಸ್ಲಾಮ್‌ನಲ್ಲಿ ಕಳೆದ 27 ಪಂದ್ಯಗಳಲ್ಲಿ ಫ್ರಾನ್ಸ್‌ನ ಯಾವೊಬ್ಬ ಆಟಗಾರನೂ ಜೊಕೊವಿಕ್‌ಗೆ ಸೋಲುಣಿಸಿಲ್ಲ. ಜೊಕೊವಿಕ್ 2010ರಲ್ಲಿ ಮೆಲ್ಬೋರ್ನ್‌ನಲ್ಲಿ ಜೋ-ವಿಲ್ಫ್ರೆಡ್ ಸೊಂಗರನ್ನು ಸೋಲಿಸಿದ ಬಳಿಕ ಇದೀಗ ಲುಕಾಸ್‌ಗೆ ಸೋಲುಣಿಸಿದ್ದಾರೆ. ಜೊಕೊವಿಕ್‌ಗೆ ಇದು 34ನೇ ಗ್ರಾನ್‌ಸ್ಲಾಮ್ ಸೆಮಿಫೈನಲ್. ಇದೀಗ ಅವರು ಕಳೆದ 10 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. 24ರ ಹರೆಯದ ಲುಕಾಸ್ ಇದೇ ಮೊದಲ ಬಾರಿ ಸೆಮಿಗೆ ತಲುಪಿದ್ದರು.

ಏಳನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಶೋಧದಲ್ಲಿರುವ ಜೊಕೊವಿಕ್ ರವಿವಾರ ನಡೆಯಲಿರುವ ಫೈನಲ್‌ನಲ್ಲಿ 2ನೇ ಶ್ರೇಯಾಂಕದ ರಫೆಲ್ ನಡಾಲ್‌ರನ್ನು ಮುಖಾಮುಖಿಯಾಗಲಿದ್ದಾರೆ. ಏಳು ವರ್ಷಗಳ ಬಳಿಕ ಈ ಇಬ್ಬರು ಆಟಗಾರರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. 2012ರಲ್ಲಿ ಇವರಿಬ್ಬರೂ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಸೆಣಸಾಡಿದ್ದರು. ಆಗ ಐದು ಗಂಟೆ, 53 ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಪಂದ್ಯದಲ್ಲಿ ಜೊಕೊವಿಕ್ ಜಯಭೇರಿ ಬಾರಿಸಿದ್ದರು. ಇದು ಗ್ರಾನ್‌ಸ್ಲಾಮ್ ಫೈನಲ್‌ನ ಸುದೀರ್ಘ ಅವಧಿ ಪಂದ್ಯವಾಗಿ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದೆ.

ಜೊಕೊವಿಕ್ ರವಿವಾರ ತನ್ನ ಹಳೆಯ ಎದುರಾಳಿ ನಡಾಲ್ ವಿರುದ್ಧ 53ನೇ ಬಾರಿ ಹಾಗೂ ಗ್ರಾನ್‌ಸ್ಲಾಮ್ ಫೈನಲ್‌ನಲ್ಲಿ 8ನೇ ಬಾರಿ ಸೆಣಸಾಡಲಿದ್ದಾರೆ. ನಡಾಲ್ 17 ಬಾರಿ ಹಾಗೂ ರೋಜರ್ ಫೆಡರರ್ 20 ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ. ಜೊಕೊವಿಕ್ 15ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ವಿಂಬಲ್ಡನ್ ಹಾಗೂ ಸೆಪ್ಟಂಬರ್‌ನಲ್ಲಿ ಯುಎಸ್ ಓಪನ್ ಪ್ರಶಸ್ತಿ ಜಯಿಸಿರುವ ಜೊಕೊವಿಕ್ ಸತತ ಮೂರನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಕನಸು ಕಾಣುತ್ತಿದ್ದಾರೆ.

ನಡಾಲ್ ವಿರುದ್ಧ ಜೊಕೊವಿಕ್ ಮೇಲುಗೈ: ಹೆಡ್-ಟು-ಹೆಡ್ ದಾಖಲೆಯಲ್ಲಿ ಜೊಕೊವಿಕ್ ಅವರು ನಡಾಲ್ ವಿರುದ್ಧ 27-25 ಮುನ್ನಡೆಯಲ್ಲಿದ್ದಾರೆ. ಆದರೆ, ಪ್ರಮುಖ ಟೂರ್ನಿಯ ಫೈನಲ್‌ನಲ್ಲಿ ನಡಾಲ್ ಅವರು ಜೊಕೊವಿಕ್ ವಿರುದ್ಧ ಆಡಿರುವ 7 ಪಂದ್ಯಗಳ ಪೈಕಿ 4ರಲ್ಲಿ ಜಯ ಸಾಧಿಸಿ ಮೇಲುಗೈ ಸಾಧಿಸಿದ್ದಾರೆ. 2012ರಲ್ಲಿ ಈ ಇಬ್ಬರು ಆಟಗಾರರು ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಸೆಣಸಾಡಿದ್ದಾಗ ಜೊಕೊವಿಕ್ 5-7,6-4, 6-2, 6-7(5), 7-5 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದರು.

ನಡಾಲ್ ಗುರುವಾರ ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಗ್ರೀಕ್‌ನ ಯುವ ಆಟಗಾರ ಸ್ಟಿಫನೊಸ್ ಸಿಟ್‌ಸಿಪಾಸ್‌ರನ್ನು 6-2, 6-4, 6-0 ನೇರ ಸೆಟ್‌ಗಳಿಂದ ಸೋಲಿಸಿ ಆಸ್ಟ್ರೇಲಿಯನ್ ಓಪನ್‌ನಲ್ಲಿ 5ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಅವರು ಟೂರ್ನಿಯಲ್ಲಿ ಈ ತನಕ ಸೆಟನ್ನು ಕಳೆದುಕೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News