ಕತರ್ ಗೆ ಏಶ್ಯಕಪ್ ಫುಟ್ಬಾಲ್ ಕಿರೀಟ

Update: 2019-02-01 18:21 GMT

ಅಬುಧಾಬಿ, ಫೆ.2: ಆಕರ್ಷಕ ಓವರ್‌ಹೆಡ್ ಕಿಕ್ ಮೂಲಕ ಟೂರ್ನಿಯಲ್ಲಿ ದಾಖಲೆ 9ನೇ ಗೋಲು ಗಳಿಸಿದ ಅಲ್ಮೋಝ್ ಅಲಿ ಸಾಹಸದಿಂದ ಕತರ್ ತಂಡ ಏಶ್ಯಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಜಪಾನ್ ತಂಡವನ್ನು 3-1ರಿಂದ ಮಣಿಸಿ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದಿದೆ.

 ಶುಕ್ರವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕತರ್ ಪರ ಅಲ್ಮೋಝ್ ಅಲಿ 12ನೇ ನಿಮಿಷದಲ್ಲಿ ಮೊದಲು ಗೋಲು ಬಾರಿಸಿದರೆ, 27ನೇ ನಿಮಿಷದಲ್ಲಿ ಅಬ್ದುಲ್‌ಅಝೀಝ್ ಹತೆಮ್ ಹಾಗೂ 83ನೇ ನಿಮಿಷದಲ್ಲಿ ಅಕ್ರಂ ಆಫಿಫ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿ ತಂಡಕ್ಕೆ ಸ್ಮರಣೀಯ ಗೆಲುವು ತಂದರು.

ಏಶ್ಯಕಪ್‌ನ್ನು ಮುಡಿಗೇರಿಸಿಕೊಂಡಿರುವ ಕತರ್ 2022ರ ವಿಶ್ವಕಪ್‌ಗೆ ಮೊದಲು ಪ್ರಬಲ ಸಂದೇಶ ರವಾನಿಸಿದೆ. ಕತರ್ 2022ರ ವಿಶ್ವಕಪ್ ಆತಿಥ್ಯವಹಿಸಿಕೊಂಡಿದೆ.

69ನೇ ನಿಮಿಷದಲ್ಲಿ ಕತರ್ ರಕ್ಷಣಾ ಕೋಟೆ ಬೇಧಿಸಿದ ತಾಕುಮಿ ಮಿನಾಮಿನೊ ಜಪಾನ್ ಪರ ಏಕೈಕ ಗೋಲು ಗಳಿಸಿ ತಂಡದ ಸೋಲಿನ ಅಂತರವನ್ನು ತಗ್ಗಿಸಿದರು. ಕತರ್ ಟೂರ್ನಿಯಲ್ಲಿ ತನ್ನ ಏಳನೇ ಪಂದ್ಯದಲ್ಲಿ ಮೊದಲ ಬಾರಿ ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಟ್ಟಿತು. ಕತರ್ ಏಶ್ಯಕಪ್ ಕೂಟದಲ್ಲಿ ಒಟ್ಟು 19 ಗೋಲುಗಳನ್ನು ದಾಖಲಿಸಿದ್ದು, ಕೇವಲ ಒಂದು ಗೋಲು ಬಿಟ್ಟುಕೊಟ್ಟಿದೆ.

ಸೂಡಾನ್ ಸಂಜಾತ 22ರ ಹರೆಯದ ಅಲಿ ಟೂರ್ನಿಯಲ್ಲಿ 9ನೇ ಗೋಲನ್ನು ದಾಖಲಿಸಿ ಟೂರ್ನಿಯಲ್ಲಿ ಸರ್ವಾಧಿಕ ಗೋಲು ಗಳಿಸಿದ ದಾಖಲೆ ನಿರ್ಮಿಸಿದರು. 1996ರಲ್ಲಿ ಇರಾನ್ ಆಟಗಾರ ಅಲಿ ಡೇಸ್(8) ನಿರ್ಮಿಸಿದ್ದ ಗೋಲು ದಾಖಲೆಯನ್ನು ಮುರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News