51ನೇ ಪ್ರಯತ್ನದಲ್ಲಿ ಕೊಲಂಬಿಯ ಡೇವಿಸ್ ಕಪ್ ಪ್ರಧಾನ ಸುತ್ತಿಗೆ!
ಪ್ಯಾರಿಸ್, ಫೆ.3: ಮಾಜಿ ಚಾಂಪಿಯನ್ ಸರ್ಬಿಯ, ಜರ್ಮನಿ, ಆಸ್ಟ್ರೇಲಿಯ ಹಾಗೂ ಇಟಲಿ ಶನಿವಾರ ನೂತನ ವಿಧಾನದ ಡೇವಿಸ್ ಕಪ್ ಪ್ರಧಾನ ಸುತ್ತಿಗೆ ಕಾಲಿಟ್ಟಿವೆ. 7 ಬಾರಿಯ ಚಾಂಪಿಯನ್ ಸ್ವೀಡನ್‌ಗೆ ಆಘಾತ ನೀಡಿದ ಕೊಲಂಬಿಯ ತಂಡ ತನ್ನ 51ನೇ ಪ್ರಯತ್ನದಲ್ಲಿ ರವಿವಾರ ಪ್ರಧಾನ ಸುತ್ತಿಗೆ ಪ್ರವೇಶ ಗಿಟ್ಟಿಸಿತು.
1959ರಿಂದ ಫೈನಲ್ಸ್ ತಲುಪಲು ಶತಪ್ರಯತ್ನ ನಡೆಸಿದ್ದ ದಕ್ಷಿಣ ಅಮೆರಿಕನ್ನರು ಈ ಬಾರಿ ಯಶಸ್ಸು ಕಂಡಿದ್ದಾರೆ. ಬಗೋಟದಲ್ಲಿ ನಡೆದ ಟೂರ್ನಿಯಲ್ಲಿ ಕೊಲಂಬಿಯದ ಜುವಾನ್ ಸೆಬಾಸ್ಟಿಯನ್ ಕೆಬೆಲ್ ಹಾಗೂ ರಾಬರ್ಟ್ ಫರಾಹ್ ಡಬಲ್ಸ್‌ಲ್ಲಿ ಸ್ವೀಡನ್ ಆಟಗಾರರನ್ನು ಮಣಿಸುವ ಮೂಲಕ 3-0ಯಿಂದ ಮುನ್ನಡೆ ಸಾಧಿಸಿ ಸುಮಾರು ಅರ್ಧ ಶತಮಾನದ ನೋವಿಗೆ ವಿದಾಯ ಹೇಳಿದರು.
ಸಿಂಗಲ್ಸ್ ಪಂದ್ಯದಲ್ಲಿ ಅಲೆಜಾಂಡ್ರೊ ಗೊಂಝಾಲೆಝ್ ಅವರು ಎಲಿಯಾಸ್ ವಾಯ್‌ಮರ್ ಅವರನ್ನು 6-3, 6-3 ಸೆಟ್‌ಗಳ ಅಂತರದಿಂದ ಮಣಿಸಿ ಕೊಲಂಬಿಯ ಮುನ್ನಡೆಯನ್ನು 4-0ಗೆ ಹೆಚ್ಚಿಸಿದರು.
1993ರಲ್ಲಿ ಕೊನೆಯ ಬಾರಿ ಡೇವಿಸ್ ಕಪ್ ಮುಡಿಗೇರಿಸಿಕೊಂಡಿರುವ ಜರ್ಮನಿ ಅರ್ಹತಾ ಟೂರ್ನಿಯಲ್ಲಿ ಹಂಗರಿಯನ್ನು ಸೋಲಿಸಿ ಪ್ರಧಾನ ಸುತ್ತಿಗೇರಿತು. ಆಸ್ಟ್ರೇಲಿಯ ಬೊಸ್ನಿಯಾವನ್ನು ಮಣಿಸಿ ಪ್ರವೇಶ ಪಡೆದರೆ ಇಟಲಿ ತಂಡ ಭಾರತವನ್ನು ಸೋಲಿಸಿ ಡೇವಿಸ್ ಕಪ್ ಪ್ರಧಾನ ಸುತ್ತಿಗೆ ಪಾದಾರ್ಪಣೆ ಮಾಡಿದೆ.