ವರ್ಷಾಂತ್ಯದಲ್ಲಿ ಟೆನಿಸ್‌ಗೆ ಮರಳುವ ಚಿಂತನೆ: ಸಾನಿಯಾ ಮಿರ್ಝಾ
Update: 2019-02-03 23:25 IST
ಹೈದರಾಬಾದ್, ಫೆ.3: ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿರುವ ತಾರಾ ಟೆನಿಸ್ ಆಟಗಾರ್ತಿ, ಕ್ರಿಕೆಟರ್ ಶುಐಬ್ ಮಲಿಕ್ ಪತ್ನಿ ಸಾನಿಯಾ ಮಿರ್ಝಾ ವರ್ಷಾಂತ್ಯದಲ್ಲಿ (ಬಹುತೇಕ ಯುಎಸ್ ಓಪನ್‌ಗೆ) ಟೆನಿಸ್‌ಗೆ ಮರಳಲು ಸಿದ್ಧತೆ ನಡೆಸಿರುವುದಾಗಿ ಹೇಳಿದ್ದಾರೆ. ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡ ಬಳಿಕ ಮಾತನಾಡಿದ 6 ಬಾರಿಯ ಗ್ರಾನ್‌ಸ್ಲಾಮ್ ವಿಜೇತೆ, ಟೆನಿಸ್ ತನ್ನ ಆದ್ಯತೆಯಾಗಿದ್ದು, ವರ್ಷಾಂತ್ಯದಲ್ಲಿ ಆಟಕ್ಕೆ ಮರಳುವ ಚಿಂತನೆ ನಡೆಸಿದ್ದಾಗಿ ತಿಳಿಸಿದ್ದಾರೆ. ಅಂಗಣಕ್ಕಿಳಿಯುವ ಪೂರ್ವದಲ್ಲಿ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ. ‘‘ಒಬ್ಬ ಮಹಿಳೆಯಾಗಿ ಮದುವೆಯಾಗುವುದು, ಮಕ್ಕಳನ್ನು ಹೊಂದುವುದು ನಮ್ಮ ಇಚ್ಛೆಯಾಗಿರುತ್ತದೆ. ಮಗುವನ್ನು ಪೋಷಿಸುವ ಅನುಭವವು ನಿಸ್ವಾರ್ಥ ಪ್ರೀತಿಯಂತೆ. ಯುಎಸ್ ಓಪನ್ ವೇಳೆಗೆ ಆಟಕ್ಕೆ ಮರಳುವ ವಿಶ್ವಾಸವಿದೆ’’ ಎಂದು ಸಾನಿಯಾ ಹೇಳಿದ್ದಾರೆ.