ಐಸಿಸಿ ಏಕದಿನ ರ‍್ಯಾಂಕಿಂಗ್: ಭಾರತ ನಂ.2
ಚಹಾಲ್, ಕೇದಾರ್, ಧೋನಿಗೆ ಭಡ್ತಿ
ದುಬೈ, ಫೆ.4: ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಸೋಮವಾರ ಪ್ರಕಟಿಸಿರುವ ನೂತನ ಏಕದಿನ ರ್ಯಾಂಕಿಂಗ್‌ನಲ್ಲಿ ಭಾರತ ತಂಡ ಎರಡನೇ ಸ್ಥಾನಕ್ಕೇರಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಸಹ ಆಟಗಾರ ಜಸ್‌ಪ್ರಿತ್ ಬುಮ್ರಾ ಕ್ರಮವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ.
ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್ ವಿರುದ್ಧ ಸರಣಿಗಳನ್ನು ಜಯಿಸಿ ಒಟ್ಟು 122 ಅಂಕ ಗಳಿಸಿರುವ ಭಾರತ, ಇಂಗ್ಲೆಂಡ್(126 ಅಂಕ) ನಂತರದ ಸ್ಥಾನದಲ್ಲಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ತಂಡ ವಿಭಾಗದಲ್ಲಿ ಕಿವೀಸ್ ನಾಲ್ಕನೇ ಸ್ಥಾನಕ್ಕಿಳಿದರೆ, ದ.ಆಫ್ರಿಕಾ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯ ವಿರುದ್ಧ ಸತತ ಮೂರು ಅರ್ಧಶತಕ ಸಿಡಿಸಿ ಸರಣಿ ಶ್ರೇಷ್ಠ ಗೌರವ ಪಡೆದಿದ್ದ ಭಾರತ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಮೂರು ಸ್ಥಾನ ಏರಿಕೆ ಕಂಡು 17ನೇ ಸ್ಥಾನದಲ್ಲಿದ್ದಾರೆ.
ಭಾರತ ವಿರುದ್ಧದ ಸರಣಿಯಲ್ಲಿ 12 ವಿಕೆಟ್‌ಗಳನ್ನು ಪಡೆದ ನ್ಯೂಝಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಬೌಲರ್‌ಗಳ ವಿಭಾಗದಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಜ.2016ರಲ್ಲಿ ಬೌಲ್ಟ್ ಅಗ್ರಸ್ಥಾನದಲ್ಲಿದ್ದರು. ಬೌಲಿಂಗ್ ವಿಭಾಗದಲ್ಲಿ ಭಾರತದ ಯಜುವೇಂದ್ರ ಚಹಾಲ್ ಒಂದು ಸ್ಥಾನ ಏರಿಕೆ ಕಂಡು 5ನೇ ಸ್ಥಾನ, ಭುವನೇಶ್ವರ ಕುಮಾರ 6 ಸ್ಥಾನ ಭಡ್ತಿ ಪಡೆದು 17ನೇ ಸ್ಥಾನದಲ್ಲಿದ್ದಾರೆ.
ರ್ಯಾಂಕಿಂಗ್‌ನಲ್ಲಿ ಏರಿಕೆ ಕಂಡ ಕೊಹ್ಲಿ ಪಡೆಯ ಇನ್ನೋರ್ವ ದಾಂಡಿಗ ಕೇದಾರ್ ಜಾಧವ್. 8 ಸ್ಥಾನ ಭಡ್ತಿ ಪಡೆದಿರುವ ಅವರು, 35ನೇ ಸ್ಥಾನ ಅಲಂಕರಿಸಿದ್ದಾರೆ.