ಫುಟ್ಬಾಲ್ ಆಟಗಾರ ಎಮಿಲಿನೊ ಪ್ರಯಾಣಿಸಿದ್ದ ವಿಮಾನದ ಅವಶೇಷ ಪತ್ತೆ
ಕಾರ್ಡಿಫ್, ಫೆ.4: ಅರ್ಜೆಂಟೀನ ಫುಟ್ಬಾಲ್ ಆಟಗಾರ ಎಮಿಲಿನೊ ಸಾಲಾ ಹೊತ್ತೊಯ್ದ ವಿಮಾನದ ಅವಶೇಷ ಹಾಗೂ ಅದರ ಪೈಲಟ್ ಶವ ಪತ್ತೆಯಾಗಿದೆ ಎಂದು ತನಿಖಾಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ. 28ರ ಹರೆಯದ ಪ್ರೀಮಿಯರ್ ಲೀಗ್ ಫುಟ್ಬಾಲ್ ಆಟಗಾರ ಎಮಿಲಿನೊ ಜ.21 ರಂದು ತನ್ನ ಹೊಸ ಕ್ಲಬ್ ಕಾರ್ಡಿಫ್ ಸಿಟಿಯನ್ನು ಸೇರಿಕೊಳ್ಳಲು ಫ್ರಾನ್ಸ್‌ನಿಂದ ಕಾರ್ಡಿಫ್‌ಗೆ ಹಗುರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ವಿಮಾನ ಚಾನಲ್ ದ್ವೀಪ ಸಮೂಹ ಬಳಿ ಪತನಗೊಂಡಿತ್ತು. ಸಾರ್ವಜನಿಕರಿಂದ 43,000 ಯುಎಸ್ ಡಾಲರ್ ನಿಧಿ ಸಂಗ್ರಹಿಸಿದ ಎಮಿಲಿನೊ ಕುಟುಂಬ ಸದಸ್ಯರು ಖಾಸಗಿ ಬೋಟ್‌ನ್ನು ಬಾಡಿಗೆಗೆ ಪಡೆದು ಚಾನಲ್ ದ್ವೀಪ ಸಮೂಹದಲ್ಲಿ ಶೋಧ ಕಾರ್ಯ ಆರಂಭಿಸಿದ ಕೆಲವೇ ಗಂಟೆಯಲ್ಲಿ ವಿಮಾನದ ಅವಶೇಷ ಪತ್ತೆಯಾಗಿದೆ. ಎಮಿಲಿನೊ ಹಾಗೂ 59 ವರ್ಷದ ಡೇವಿಡ್ ಹೆಸರಿನ ಪೈಲಟ್ ಪ್ರಯಾಣಿಸುತ್ತಿದ್ದ ಎರಡು ಸೀಟಿನ ಪುಟ್ಟ ವಿಮಾನ ಕಳೆದ ವಾರ ಫ್ರಾನ್ಸ್ ಕರಾವಳಿಯಲ್ಲಿ ನಾಪತ್ತೆಯಾಗಿತ್ತು.
ಎರಡೂ ಫುಟ್ಬಾಲ್ ಕ್ಲಬ್‌ಗಳು ಕಳೆದ ವಾರ ಸ್ಟ್ರೈಕರ್ ಎಮಿಲಿನೊಗೆ ಶ್ರದ್ಧಾಂಜಲಿ ಸಲ್ಲಿಸಿದ್ದವು. ಬ್ರಿಟನ್‌ನ ವಿಮಾನ ಅಪಘಾತ ತನಿಖಾ ಶಾಖೆ(ಎಎಐಬಿ) ವಿಮಾನದ ಅವಶೇಷ ಪತ್ತೆ ಹಚ್ಚಲಾಗಿದೆ ಎಂದು ರವಿವಾರ ತಿಳಿಸಿದೆ. ವಿಮಾನ ಅವಶೇಷ ಸಿಕ್ಕಿದ ಬಗ್ಗೆ ಟಿವಿ ಚಾನಲ್‌ಗೆ ಪ್ರತಿಕ್ರಿಯಿಸಿದ ಎಮಿಲಿನೊ ತಂದೆ ಹೊರಾಸಿಯೊ,‘‘ ವಿಮಾನ ಅಪಘಾತವನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಅದೊಂದು ಕೆಟ್ಟ ಕನಸು. ನಾನು ನನ್ನ ಮಗನೊಂದಿಗೆ ಪ್ರತಿದಿನ ಫೋನ್‌ನಲ್ಲಿ ಮಾತನಾಡುತ್ತಿದ್ದೆ’’ ಎಂದು ಹೇಳಿದ್ದಾರೆ.