×
Ad

ಕೊಹ್ಲಿ ದಾಖಲೆ ಮುರಿಯುವತ್ತ ರೋಹಿತ್

Update: 2019-02-04 23:34 IST

ವೆಲ್ಲಿಂಗ್ಟನ್, ಫೆ.4: ಮುಂಬರುವ ನ್ಯೂಝಿಲೆಂಡ್ ವಿರುದ್ಧ ಟಿ-20 ಸರಣಿಯಲ್ಲಿ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿರುವ ಹಿನ್ನೆಲೆಯಲ್ಲಿ ನಾಯಕತ್ವದ ಹೊಣೆ ಹೊತ್ತಿರುವ 31ರ ಹರೆಯದ ರೋಹಿತ್ ಶರ್ಮಾ ಟಿ-20 ನಾಯಕತ್ವದಲ್ಲಿ ಕೊಹ್ಲಿ ದಾಖಲೆಯನ್ನು ಮುರಿಯುವತ್ತ ಚಿತ್ತಹರಿಸಿದ್ದಾರೆ.

ಮುಂಬೈ ಬ್ಯಾಟ್ಸ್‌ಮನ್ ರೋಹಿತ್ ಈ ತನಕ ಭಾರತದ ಪರ 12 ಟಿ-20 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, ಈ ಪೈಕಿ 11ರಲ್ಲಿ ಜಯ ದಾಖಲಿಸಿದ್ದಾರೆ. 2018ರಲ್ಲಿ ನಿದಾಸ್ ಟ್ರೋಫಿಯಲ್ಲಿ ಶ್ರೀಲಂಕಾ ವಿರುದ್ಧ ಏಕೈಕ ಸೋಲು ಕಂಡಿದ್ದಾರೆ. ಮತ್ತೊಂದೆಡೆ, ಕೊಹ್ಲಿ 20 ಟಿ-20 ಪಂದ್ಯಗಳಲ್ಲಿ ಭಾರತವನ್ನು ನಾಯಕನಾಗಿ ಮುನ್ನಡೆಸಿದ್ದು 12 ಪಂದ್ಯಗಳಲ್ಲಿ ಜಯ ದಾಖಲಿಸಿದ್ದಾರೆ. ಏಳು ಪಂದ್ಯಗಳಲ್ಲಿ ಸೋತಿದ್ದು, ಆಸ್ಟ್ರೇಲಿಯ ವಿರುದ್ಧ 2018ರಲ್ಲಿ ಒಂದು ಪಂದ್ಯ ಮಳೆಗಾಹುತಿಯಾಗಿತ್ತು. ಒಂದು ವೇಳೆ ನ್ಯೂಝಿಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದಿಂದ ಜಯ ಸಾಧಿಸಿದರೆ ರೋಹಿತ್ ಚುಟುಕು ಮಾದರಿ ಪಂದ್ಯದಲ್ಲಿ ಪ್ರವಾಸಿ ತಂಡದ ಎರಡನೇ ಅತ್ಯಂತ ಯಶಸ್ವಿ ನಾಯಕನಾಗಿ ಹೊರಹೊಮ್ಮುತ್ತಾರೆ. ಎಂ.ಎಸ್. ಧೋನಿ 72 ಪಂದ್ಯಗಳಲ್ಲಿ 41ರಲ್ಲಿ ಜಯ ದಾಖಲಿಸಿ ಮೊದಲ ಸ್ಥಾನದಲ್ಲಿದ್ದಾರೆ. ‘‘ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಆಟಗಾರರು ತಂಡಕ್ಕೆ ನೆರವಾದ ಸಂದರ್ಭ ಅತಿದೊಡ್ಡ ಧನಾತ್ಮಕ ಅಂಶವಾಗಿದೆ. ನ್ಯೂಝಿಲೆಂಡ್ ಪ್ರವಾಸ ಸವಾಲಿನಿಂದ ಕೂಡಿದ್ದು, ಎದುರಾಳಿ ತಂಡದ ತವರು ಮೈದಾನದಲ್ಲಿ ಸರಣಿ ಜಯಿಸಿರುವುದು ದೊಡ್ಡ ಸಾಧನೆಯಾಗಿದೆ’’ಎಂದು ರೋಹಿತ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News