×
Ad

ಭಾರತ ವಿರುದ್ಧ ಟಿ-20 ಸರಣಿ: ಗಪ್ಟಿಲ್ ಅಲಭ್ಯ

Update: 2019-02-04 23:38 IST

ವೆಲ್ಲಿಂಗ್ಟನ್, ಫೆ.4: ಬೆನ್ನುನೋವಿನಿಂದ ಚೇತರಿಸಿಕೊಳ್ಳಲು ವಿಫಲವಾಗಿರುವ ನ್ಯೂಝಿಲೆಂಡ್‌ನ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಭಾರತ ವಿರುದ್ಧದ 3 ಪಂದ್ಯಗಳ ಟ್ವೆಂಟಿ-20 ಸರಣಿಯಿಂದ ಹೊರಗುಳಿದಿದ್ದಾರೆ.

‘‘ಗಪ್ಟಿಲ್ ಫಿಟ್ನೆಸ್ ಟೆಸ್ಟ್‌ನಲ್ಲಿ ವಿಫಲರಾಗಿದ್ದಾರೆ. ಮುಂದಿನ ವಾರ ಬಾಂಗ್ಲಾದೇಶ ವಿರುದ್ಧ ಆರಂಭವಾಗಲಿರುವ ಏಕದಿನ ಅಂತರ್‌ರಾಷ್ಟ್ರೀಯ ಸರಣಿಗೆ ಲಭ್ಯವಿರುವ ವಿಶ್ವಾಸ ನನಗಿದೆ’’ ಎಂದು ಕೋಚ್ ಗ್ಯಾರಿ ಸ್ಟೀಡ್ ಹೇಳಿದ್ದಾರೆ.

ಗಪ್ಟಿಲ್ ರವಿವಾರ ವೆಲ್ಲಿಂಗ್ಟನ್‌ನಲ್ಲಿ ಭಾರತ ವಿರುದ್ಧದ ಐದನೇ ಏಕದಿನ ಪಂದ್ಯಕ್ಕಿಂತ ಮೊದಲು ಗಾಯಗೊಂಡಿದ್ದರು. ಈ ಪಂದ್ಯವನ್ನು 35 ರನ್‌ಗಳಿಂದ ಜಯಿಸಿರುವ ಪ್ರವಾಸಿ ಭಾರತ ತಂಡ 4-1 ಅಂತರದಿಂದ ಸರಣಿ ವಶಪಡಿಸಿಕೊಂಡಿತ್ತು. ಬುಧವಾರ ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿರುವ ಟ್ವೆಂಟಿ-20 ಸರಣಿಗೆ ಗಾಯಗೊಂಡಿರುವ ಗಪ್ಟಿಲ್‌ರಿಂದ ತೆರವಾದ ಸ್ಥಾನವನ್ನು ಜಿಮ್ಮಿ ನೀಶಾಮ್ ತುಂಬಲಿದ್ದಾರೆ.

ನ್ಯೂಝಿಲೆಂಡ್ ತಂಡದಲ್ಲಿ ಮಾಜಿ ರಗ್ಬಿ ಆಟಗಾರ, ಇಂಗ್ಲೆಂಡ್‌ನ ಸಹಾಯಕ ಕೋಚ್ ಜಾನ್‌ಮಿಚೆಲ್ ಪುತ್ರ ಡ್ಯಾರಿಲ್ ಮಿಚೆಲ್ ಸೇರ್ಪಡೆಯಾಗಿದ್ದಾರೆ.

ನ್ಯೂಝಿಲೆಂಡ್ ಟಿ-20 ತಂಡ: ಕೇನ್ ವಿಲಿಯಮ್ಸನ್(ನಾಯಕ), ಡಗ್ ಬ್ರೆಸ್‌ವೆಲ್, ಕಾಲಿನ್ ಡಿ ಗ್ರಾಂಡ್‌ಹೊಮ್ಮೆ, ಲಾಕಿ ಫರ್ಗ್ಯುಸನ್, ಸ್ಕಾಟ್ ಕುಗ್ಲೆಜಿನ್, ಡರಿಲ್ ಮಿಚೆಲ್, ಕಾಲಿನ್ ಮುನ್ರೊ, ಜಿಮ್ಮಿ ನೀಶಾಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೆಫರ್ಟ್, ಐಶ್ ಸೋಧಿ, ಟಿಮ್ ಸೌಥಿ ಹಾಗೂ ರಾಸ್ ಟೇಲರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News